ಬೆಂಗಳೂರು: ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿ ಬೇಷರತ್ ಕ್ಷಮೆ ಯಾಚಿಸಿದ ವಕೀಲರೊಬ್ಬರ ವಿರುದ್ಧ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ಕೈ ಬಿಟ್ಟಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಆಶೋಕ್ ಎಸ್.ಕಿಣಿಗಿ ಅವರಿದ್ದ ಪೀಠಕ್ಕೆ ಆರೋಪಿಯಾಗಿರುವ ವಕೀಲ ಬೇಷರತ್ ಕ್ಷಮೆಯಾಚಿಸುತ್ತಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈ ಬಿಟ್ಟಿದೆ.
ಪ್ರಮಾಣ ಪತ್ರ ಸಲ್ಲಿಕೆ: ಹೈಕೋರ್ಟ್ನ ಮೊದಲ ಮತ್ತು ನಾಲ್ಕನೇ ಪೀಠದ ಮುಂದೆ ಇರುವ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾನು ಕ್ಷಮೆ ಕೋರುತ್ತಿದ್ದೇನೆ. ವಿಚಾರಣಾಧೀನ ನ್ಯಾಯಾಲಯದಲ್ಲಿ ಕಿರಿಯ ವಕೀಲನಾಗಿ ಕೆಲಸ ಮಾಡುತ್ತಿದ್ದು, ದೈಹಿಕ ಬೇನೆ, ಮಾನಸಿಕ ಒತ್ತಡ ಮತ್ತು ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿಲ್ಲ ಮತ್ತು ಹೈಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡಿ ಅನುಭವ ಹೊಂದಿಲ್ಲ. ಹಿರಿಯ ವಕೀಲರಿಂದ ಮಾರ್ಗದರ್ಶನವಾಗಿಲ್ಲ ಎಂಬ ಅಂಶಗಳನ್ನು ಉಲ್ಲೇಖಿಸಿ ಫೆಬ್ರವರಿ 7ರಂದು ಜೈಲು ಅಧಿಕಾರಿಗಳ ಮೂಲಕ ನ್ಯಾಯಾಲಯಕ್ಕೆ ಕ್ಷಮೆ ಕೋರಿ ಅಫಿಡವಿಟ್ ಸಲ್ಲಿಸಿದ್ದಾರೆ. ಅಲ್ಲದೇ, ತಮ್ಮ ವಿರುದ್ಧ ಹೈಕೋರ್ಟ್ನಲ್ಲಿ ಆರು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಗಳು ಬಾಕಿ ಇವೆ.
ಹಲವು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಗಳ ಬಗ್ಗೆ ಉಲ್ಲೇಖಿಸಿದ್ದರೂ, ಈ ನ್ಯಾಯಾಲಯದಲ್ಲಿ ಮೂರು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಗಳು ಪರಿಗಣನೆಗೆ ಬಾಕಿ ಇವೆ. ನ್ಯಾಯಾಂಗದ ಕುರಿತ ಬೇಷರತ್ ಕ್ಷಮೆಯಾಚಿಸುವುದಾಗಿ ಪ್ರಮಾಣ ಪತ್ರದಲ್ಲಿ ಮನವಿ ಮಾಡಿದ್ದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈ ಬಿಟ್ಟಿದೆ.
ಒಂದು ವಾರ ಶಿಕ್ಷೆ ಅನುಭವಿಸಿದ್ದ ಆರೋಪಿ: ಫೆಬ್ರವರಿ 2ರಂದು ಮುಖ್ಯ ನ್ಯಾಯಮೂರ್ತಿ ಅವರ ಪೀಠದಲ್ಲಿ ಆರೋಪಿ ವಕೀಲ ಕೆ ಎಸ್ ಅನಿಲ್ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಬಂದಿತ್ತು. ಈ ಸಂದರ್ಭದಲ್ಲಿ ನ್ಯಾಯಾಧೀಶರನ್ನು ಪ್ರಶ್ನೆ ಮಾಡುವ ರೀತಿಯಲ್ಲಿ ಅನಿಲ್ ವಾದ ಮಂಡಿಸಿದ್ದರು. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಪೀಠ ಆರೋಪಿಯನ್ನು ಒಂದು ವಾರದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ವಹಿಸಿತ್ತು.
ಅಲ್ಲದೆ, ಫೆಬ್ರವರಿ 2ರಂದು ನ್ಯಾಯಾಲಯವು ಆರೋಪಿ ವಕೀಲ ಅನಿಲ್ ಅವರು ನ್ಯಾಯಮೂರ್ತಿಗಳ ವಿರುದ್ಧ ಆರೋಪ ಮಾಡಿರುವುದನ್ನು ನೋಡಿದರೆ ಅವರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಗೌರವವಿಲ್ಲ ಎಂಬುದು ತಿಳಿಯುತ್ತದೆ. ಪ್ರಾಕ್ಟೀಸ್ ಮಾಡುತ್ತಿರುವ ವಕೀಲರಾದ ಆರೋಪಿಯು ಹಿಂದೆಯೂ ಉತ್ತಮ ನಡತೆ ತೋರಿಲ್ಲ. ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯಾಂಗದ ಅಧಿಕಾರಿಗಳ ವಿರುದ್ಧ ಅವರು ಗುರುತರ ಆರೋಪ ಮಾಡಿದ್ದಾರೆ.
ಈ ಮೂಲಕ ಸಂಸ್ಥೆಯ ಘನತೆಯನ್ನು ತಗ್ಗಿಸುವ ಕೆಲಸ ಮಾಡುತ್ತಿದ್ದು, ಸಾರ್ವಜನಿಕರ ದೃಷ್ಟಿಯಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಗೌರವ ತಗ್ಗುವಂತೆ ಮಾಡಿದ್ದಾರೆ. ಹೀಗಾಗಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡುವುದನ್ನು ಬಿಟ್ಟು ಬೇರೆ ಮಾರ್ಗ ಇಲ್ಲ ಎಂದು ಅಭಿಪ್ರಾಯ ಪಟ್ಟಿದ್ದ ನ್ಯಾಯಪೀಠ ಅಭಿಪ್ರಾಯ ಪಟ್ಟಿತ್ತು. ಆರೋಪಿ ಸಲ್ಲಿಸಿರುವ ಕ್ಷಮೆಯನ್ನು ಪರಿಗಣಿಸಿ ಅವುಗಳನ್ನು ಇತ್ಯರ್ಥಪಡಿಸಲಾಗಿದೆ. ತಕ್ಷಣ ಆರೋಪಿಯನ್ನು ಬಿಡುಗಡೆ ಮಾಡಬೇಕು ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಇದನ್ನೂ ಓದಿ: ಫೇಸ್ಬುಕ್ನಲ್ಲಿ ಪರಿಚಯ: ಮದುವೆಯಾಗುವುದಾಗಿ ನಂಬಿಸಿ ವರ್ತಕನಿಗೆ ವಂಚಿಸಿದ ಮಹಿಳೆ