ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್, ಕೆ.ಗೋವಿಂದರಾಜ್, ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರ ಸುನೀಲ್ ಕನಗೋಲು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಕೆ.ವಿ. ಪ್ರಭಾಕರ್ ಅವರನ್ನು ನೇಮಕ ಮಾಡಿ ಸಂಪುಟ ದರ್ಜೆಯ ಸ್ಥಾನಮಾನ ನೀಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ನ್ಯಾಯಪೀಠ: ವಕೀಲರಾದ ಎಸ್. ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ಧೀಕ್ಷಿತ್ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ. ಅಲ್ಲದೆ, ಸಚಿವರನ್ನು ಹೊರತು ಪಡಿಸಿ ಇತರರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಬಾರದು ಎಂಬುದಾಗಿ ಎಲ್ಲಿಯೂ ಹೇಳಿಲ್ಲ. ಅಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವವರಿಗೆ ಯಾವುದೇ ಇಲಾಖೆ ನೀಡಿ ಸರ್ಕಾರದ ಜವಾಬ್ದಾರಿಗಳನ್ನು ನೀಡಿಲ್ಲ ಎಂದು ಅಭಿಪ್ರಾಯ ಪಟ್ಟ ನ್ಯಾಯಪೀಠ, ಅರ್ಜಿ ವಜಾಗೊಳಿಸಿದ್ದಕ್ಕೆ ಸೂಕ್ತ ಕಾರಣಗಳನ್ನು ವಿವರವಾದ ಆದೇಶದಲ್ಲಿ ಉಲ್ಲೇಖಿಸಲಾಗುವುದು ಎಂದು ತಿಳಿಸಿದೆ.
ಅರ್ಜಿಯಲ್ಲಿರುವ ಅಂಶಗಳೇನು?: ನಜೀರ್ ಅಹ್ಮದ್, ಕೆ. ಗೋವಿಂದರಾಜ್, ಸುನೀಲ್ ಕನಗೋಲು ಹಾಗೂ ಕೆ. ವಿ. ಪ್ರಭಾಕರ್ ಅವರಿಗೆ ಈ ಹುದ್ದೆಗಳನ್ನು ಸೃಷ್ಟಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಅವರಿಗೆ ನೀಡಲಾಗುವ ಸಂಬಳ, ಸಾರಿಗೆ, ವಸತಿ ಭತ್ಯೆ ಇತ್ಯಾದಿ ಖರ್ಚುಗಳು ರಾಜ್ಯದ ಬೊಕ್ಕಸದಿಂದ ವಿನಾ ಕಾರಣ ಭರಿಸುವಂತಾಗಿದೆ. ಇವೆಲ್ಲ ರಾಜಕೀಯ ನೇಮಕಾತಿ ಹಾಗೂ ಏಕಪಕ್ಷೀಯ ನಿರ್ಧಾರಗಳು.
ಮುಖ್ಯಮಂತ್ರಿಗಳ ಕಚೇರಿ ಎಂಬುದು ಸಾರ್ವಜನಿಕ ಕಚೇರಿ. ಆದರೆ, ಇಲ್ಲೀಗ ಮುಖ್ಯಮಂತ್ರಿಗಳ ಬಂಧುಗಳು, ಅವರ ರಾಜಕೀಯ ಬೆಂಬಲಿಗರಿಗೆ ಆಸ್ಪದ ನೀಡಲಾಗಿದೆ. ಕಾನೂನಿನಲ್ಲಿ ಇಂತಹ ಹುದ್ದೆಗಳನ್ನು ರೂಪಿಸಲು ಅವಕಾಶವಿಲ್ಲ. ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ. ಉತ್ತಮ ಆಡಳಿತ ನೀಡುವ ಮೂಲಭೂತ ಆಶಯಗಳಿಗೆ ವಿರುದ್ಧವಾಗಿದೆ. ಅರ್ಜಿಯಲ್ಲಿನ ಪ್ರತಿವಾದಿಗಳಾಗಿರುವ ಖಾಸಗಿ ವ್ಯಕ್ತಿಗಳಿಗೆ ಸಾರ್ವಜನಿಕ ಕಚೇರಿಯಲ್ಲಿ ಮುಂದುವರೆಯಲು ಅವಕಾಶ ನೀಡಿದಲ್ಲಿ ದುರುಪಯೋಗ ಆಗಲಿದೆ. ಹೀಗಾಗಿ ತಕ್ಷಣದಿಂದ ಅವರ ಕಾರ್ಯವನ್ನು ಸ್ಥಗಿತಗೊಳಿಸಲು ಮಧ್ಯಂತರ ಆದೇಶ ನೀಡಬೇಕು ಎಂದು ಉಮಾಪತಿ ಅರ್ಜಿಯಲ್ಲಿ ಕೋರಿದ್ದರು.
ಇದನ್ನೂ ಓದಿ: ಪರೇಡ್ ವೇಳೆ ಸಾವ್ಧಾನ್ - ವಿಶ್ರಾಮ್ ಎಂಬ ಪದಗಳಿಗೆ ತಿಲಾಂಜಲಿ.. ಇನ್ಮುಂದೆ ಕನ್ನಡದಲ್ಲೇ ಕಮಾಂಡ್