ಬೆಂಗಳೂರು: ವಿಧಾನ ಪರಿಷತ್ ಬಿಜೆಪಿ ಸದಸ್ಯ ಶಶೀಲ್ ನಮೋಶಿ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ–2002ರ (ಪಿಎಂಎಲ್ ಕಾಯ್ದೆ) ಅಡಿಯಲ್ಲಿ ದಾಖಲಿಸಲಾಗಿದ್ದ ಖಾಸಗಿ ದೂರನ್ನು ಕಲಬುರಗಿ ಹೈಕೋರ್ಟ್ ಪೀಠ ರದ್ದುಗೊಳಿಸಿದೆ.
ತಮ್ಮ ವಿರುದ್ಧ ದಾಖಲಾದ ಪ್ರಕರಣ ರದ್ದು ಕೋರಿ ಶಶೀಲ್ ನಮೋಶಿ ಸೇರಿದಂತೆ ಮೂವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಸ್.ಸುನಿಲ್ ದತ್ ಯಾದವ್ ಅವರಿದ್ದ ರಜಾಕಾಲದ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ‘ಪಿಎಂಎಲ್ ಕಾಯ್ದೆ ಅಡಿ ದಾಖಲಿಸುವ ಖಾಸಗಿ ವ್ಯಕ್ತಿಗಳ ದೂರುಗಳನ್ನು ವಿಚಾರಣಾ ನ್ಯಾಯಾಲಯಗಳು ಪುರಸ್ಕರಿಸುವಂತಿಲ್ಲ’ ಎಂದು ಆದೇಶಿಸಿದೆ.
ನಮೋಶಿ ಹೈದರಾಬಾದ್-ಕರ್ನಾಟಕ ಎಜುಕೇಶನ್ ಸೊಸೈಟಿ (ಎಚ್‌ಕೆಇ) ಅಧ್ಯಕ್ಷರಾದ ಸಮಯದಲ್ಲಿ ಸೊಸೈಟಿ ಹಣದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಒ.ಎಂ. ಮಹೇಶ್ ಮತ್ತು ಲಿಂಗನಗೌಡ ಎಂಬುವರು 2016ರಲ್ಲಿ ನಮೋಶಿ ಮತ್ತು ಕಲಬುರಗಿಯ ಒ.ಹೆಚ್. ಅಮರೇಶ್ ಮತ್ತು ಬೆಂಗಳೂರಿನ ಲಿಂಗನಗೌಡ ವಿರುದ್ಧ ಖಾಸಗಿ ದೂರನ್ನು ಸಲ್ಲಿಸಿದ್ದರು.
ಈ ದೂರಿನ ಅಂಶಗಳನ್ನು ಸಂಜ್ಞೆಯ ಅಪರಾಧವೆಂದು ಪರಿಗಣಿಸಿದ್ದ ಮಂಗಳೂರಿನ ವಿಶೇಷ ನ್ಯಾಯಾಲಯ (ಪಿಎಂಎಲ್ ಕಾಯ್ದೆ ವ್ಯಾಪ್ತಿಯ ವಿಶೇಷ ಕೋರ್ಟ್) ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಲು ಆದೇಶಿಸಿತ್ತು. ಇದೀಗ ಖಾಸಗಿ ದೂರನ್ನು ಹೈಕೋರ್ಟ್ ಪೀಠ ರದ್ದು ಮಾಡಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಅತ್ತೆ-ಮಾವನ ಮನೆ ಕಬ್ಜಾ.. ಡಿಸಿ ಕಚೇರಿ ಬಳಿ ರಂಪಾಟ ಮಾಡಿದ ಮಹಿಳೆ ಬಂಧನ