ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠ ಬುಧವಾರ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ಸಾಮಾಜಿಕ ಕಾರ್ಯಕರ್ತ ವೆಂಕಟೇಶ ಶೆಟ್ಟಿ ಹಾಗೂ ಇತರರು ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿ, ಐಪಿಎಲ್ ಟೂರ್ನಿಗೆ ಕ್ರಿಕೆಟ್ ಆಟಗಾರರ ಹರಾಜು ಹಾಕುವುದು ಮಾನವ ಹಕ್ಕುಗಳ ಉಲ್ಲಂಘನೆ ಆಗಲಿದೆ. ವಸ್ತುಗಳಂತೆ ಆಟಗಾರರನ್ನು ಹರಾಜು ಮಾಡುವುದು ಕಾನೂನು ಬಾಹಿರವಾಗಿದೆ. ಆದ್ದರಿಂದ ಕ್ರಿಕೆಟ್ ಆಟಗಾರರ ಹರಾಜಿಗೆ ತಡೆ ನೀಡಬೇಕು ಮತ್ತು ಈ ಪದ್ಧತಿಯನ್ನು ರದ್ದುಪಡಿಸಬೇಕೆಂದು ಮನವಿ ಮಾಡಿದ್ದರು.
ಈ ಬಗ್ಗೆ ತೀರ್ಪು ನೀಡಿದ ವಿಭಾಗೀಯ ಪೀಠವು ಐಪಿಎಲ್ ಟೂರ್ನಿಯ ಕ್ರಿಕೆಟ್ ಆಟಗಾರರ ಹರಾಜು ಈಗಾಗಲೇ ಮುಕ್ತಾಯಗೊಂಡಿದ್ದು, ಟೂರ್ನಿಯೂ ಅಂತ್ಯವಾಗಿದೆ. ಗೆದ್ದ ತಂಡಕ್ಕೆ ಕಪ್ ಕೂಡ ನೀಡಲಾಗಿದೆ. ಈ ಹಂತದಲ್ಲಿ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ಅಭಿಪ್ರಾಯಪಟ್ಟು ವಜಾ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರೂಖ್ ಖಾನ್ ಸೇರಿದಂತೆ ಎಲ್ಲ ಐಪಿಎಲ್ ತಂಡಗಳ ಮಾಲೀಕರು ಮತ್ತು ಬಿಸಿಸಿಐ ಪದಾಧಿಕಾರಿಗಳನ್ನು ಈ ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಉಲ್ಲೇಖಿಸಲಾಗಿತ್ತು.
ಇದನ್ನೂ ಓದಿ: ಕೇಂದ್ರದ ವಿರುದ್ಧ ಟ್ವಿಟರ್ ಕಾನೂನು ಸಮರ: ಕಠಿಣ ನಿರ್ಬಂಧಗಳ ರದ್ದತಿಗೆ ಹೈಕೋರ್ಟ್ಗೆ ಅರ್ಜಿ