ಬೆಂಗಳೂರು : ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 309 ಪ್ರಕಾರ ಕೊಲೆ, ದರೋಡೆ ಮತ್ತಿತರ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ನಿತ್ಯ ವಿಚಾರಣೆ ನಡೆಸುವಂತೆ ಹೈಕೋರ್ಟ್, ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶಿಸಿದೆ.
ವಿಚಾರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ತಮಗೆ ಜಾಮೀನು ನೀಡುವಂತೆ ಕೋರಿ ಆರೋಪಿ ಅನ್ಸು ಸಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಚಾಮರಾಜನಗರದ ಗುಂಡ್ಲುಪೇಟೆಯ ತ್ರಿವಳಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿ ಅನ್ಸು ಅಲಿಯಾಸ್ ಅನ್ಸಾರ್ ಆಲಿ ಸಲ್ಲಿಸಿದ್ದ ಅರ್ಜಿಯನ್ನು ಮೂರನೇ ಬಾರಿಗೆ ವಜಾಗೊಳಿಸಿದೆ.
ಇತ್ತೀಚಿನ ದಿನಗಳಲ್ಲಿ ಸೆಷನ್ಸ್ ಕೋರ್ಟ್‌ಗಳಲ್ಲಿ ಅಪರಾಧ ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿದೆ ಎಂಬ ಕಾರಣಕ್ಕೆ ಹಲವು ವಕೀಲರು ಆರೋಪಿಗಳಿಗೆ ಜಾಮೀನು ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ. ಶಂಬಾನಾಥ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ವಿಚಾರಣಾ ನ್ಯಾಯಾಲಯಗಳು ವಕೀಲರು ಮನವಿ ಮಾಡಿದ್ದಾರೆ ಎಂಬ ಕಾರಣಕ್ಕೆ ವಿಚಾರಣೆಗಳನ್ನು ಮುಂದೂಡುವಂತಿಲ್ಲ ಮತ್ತು ಸೂಕ್ತ ಕಾರಣ ನಮೂದಿಸದೇ ವಿಚಾರಣೆಗಳನ್ನು ಮುಂದೂಡಿಕೆ ಮಾಡುವಂತಿಲ್ಲ. ಹಾಗೆ ಮಾಡಿದರೆ ತ್ವರಿತ ನ್ಯಾಯದಾನ ಮಾಡಬೇಕೆಂಬ ಸಿಆರ್‌ಪಿಸಿ ಸೆಕ್ಷನ್ 309 ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ. ಅಲ್ಲದೇ, ಸುಪ್ರೀಂಕೋರ್ಟ್ ಆದೇಶದಂತೆ ಮತ್ತು ಅಪರಾಧ ದಂಡ ಸಂಹಿತೆಯ 18ನೇ ಅಧ್ಯಾಯದಲ್ಲಿ ಇರುವಂತೆ ಪ್ರತಿದಿನ ವಿಚಾರಣೆ ನಡೆಸಬೇಕೆನ್ನುವ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿಲ್ಲ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.
ಚಾಮರಾಜನಗರದ ಸೆಷನ್ಸ್ ನ್ಯಾಯಾಲಯದ ಆದೇಶಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಪೀಠ, ಹಲವು ಬಾರಿ ವಿಚಾರಣೆಯನ್ನು ಕಾರಣವಿಲ್ಲದೇ ಮುಂದೂಡಿಕೆ ಮಾಡಲಾಗಿದೆ. ಎಷ್ಟೋ ಬಾರಿ ಸಾಕ್ಷ್ಯಗಳಿದ್ದರೂ ಸಹ ಆರೋಪಿ ಪರ ವಕೀಲರು ವಿಚಾರಣೆ ಮುಂದೂಡಿಸಿಕೊಂಡಿದ್ದಾರೆ. ಆದರೆ, ಒಂದೆಡೆ ಈ ರೀತಿ ವಿಚಾರಣೆಯನ್ನು ಮುಂದೂಡಿಸಿಕೊಂಡು ಮತ್ತೊಂದೆಡೆ ವಿಚಾರಣೆ ವಿಳಂಬವಾಗುತ್ತಿದೆ ಎಂದು ಆರೋಪಿ ಜಾಮೀನು ಕೋರುವುದು, ಎರಡೂ ಕೆಲಸಗಳನ್ನು ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ವಿಚಾರಣೆ ವೇಳೆ ಆರೋಪಿ ಪರ ವಕೀಲರು, ಅರ್ಜಿದಾರರು ಮೂರು ವರ್ಷಗಳಿಗೂ ಅಧಿಕ ಕಾಲ ಕಸ್ಟಡಿಯಲ್ಲಿದ್ದಾರೆ ಮತ್ತು ವಿಚಾರಣೆ ಇನ್ನೂ ಆರಂಭವಾಗಿಲ್ಲ. ವಿಚಾರಣಾ ನ್ಯಾಯಾಲಯವು ಪ್ರಕರಣವನ್ನು ಮುಂದೂಡುತ್ತಿದೆ ಮತ್ತು ಪ್ರಾಸಿಕ್ಯೂಷನ್ ಸಾಕ್ಷಿಗಳ ಸಾಕ್ಷ್ಯವನ್ನು ದಾಖಲಿಸಿಲ್ಲ. ಸಂವಿಧಾನದ ಅಡಿ ತ್ವರಿತ ವಿಚಾರಣೆ ಖಾತರಿಪಡಿಸಲಾಗಿದೆ. ಹಾಗಾಗಿ ವಿಚಾರಣೆ ವಿಳಂಬವಾಗಿದ್ದು, ಜಾಮೀನು ಪಡೆಯಲು ಅರ್ಹರು ಎಂದು ವಾದಿಸಿದರು.
ಪ್ರಕರಣದ ಹಿನ್ನೆಲೆ: 2020ರಲ್ಲಿ ಗುಂಡ್ಲುಪೇಟೆಯಲ್ಲಿ ಝಕುಲ್ಲಾ, ಕೈಸರ್ ಮತ್ತು ಇದ್ರೀಸ್ ಎಂಬ ಮೂವರ ಕೊಲೆಯಾಗಿತ್ತು. ಇದಕ್ಕೆ ಅಕ್ಕಿ ಮತ್ತು ಗೋವು ಸಾಗಾಣೆ ಸಂಬಂಧ ನಡೆದಿದ್ದ ಗಲಾಟೆಯೇ ಕಾರಣ ಎಂದು ಹೇಳಲಾಗಿತ್ತು. ಅನ್ಸಾರ್ ಸೇರಿದಂತೆ 19 ಮಂದಿ ಆರೋಪಿಗಳು ಚಾಕು, ಕತ್ತಿ ಸೇರಿ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಮುಜಿಬುಲ್ ರೆಹಮಾನ್ ಪೊಲೀಸರಿಗೆ ದೂರು ನೀಡಿದ್ದರು. ಆನಂತರ ಪೊಲೀಸರು ಆರೋಪಿ ಅನ್ಸಾರ್‌ನನ್ನು ಬಂಧಿಸಿದ್ದರು. 2021ರ ಮಾರ್ಚ್ 8ರಂದು ಆತನ ಮೊದಲ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ನಂತರ 2022ರ ಮಾರ್ಚ್ 22ರಂದು ಎರಡನೇ ಬಾರಿಯೂ ವಜಾ ಮಾಡಿತ್ತು. ಇದೀಗ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆ ಪ್ರಶ್ನಿಸಿ ಪರಿಸರವಾದಿಗಳು ಸಲ್ಲಿಸಿದ್ದ ಅರ್ಜಿ ವಿಲೇವಾರಿ