ಬೆಂಗಳೂರು: ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್) ಯೋಜನೆಯಲ್ಲಿ ಪ್ರಾರಂಭಿಸಿದ್ದ ಹಿಂದು ಅವಿಭಕ್ತ ಕುಟುಂಬ(ಎಚ್‌ಯುಎಫ್) ಉಳಿತಾಯ ಖಾತೆಯಲ್ಲಿ ಠೇವಣಿಯಿಟ್ಟ ಹಣಕ್ಕೆ ಬಡ್ಡಿ ಸಹಿತ ಹಿಂದಿರುಗಿಸಲು ಭಾರತೀಯ ಅಂಚೆ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ.
ಅಂಚೆ ಇಲಾಖೆಯಲ್ಲಿನ ಉಳಿತಾಯ ಖಾತೆಯ ಠೇವಣಿಗೆ ಬಡ್ಡಿ ಪಾವತಿಸುವುದಿಲ್ಲ ಎಂದು ತಿಳಿಸಿ ಪತ್ರ ಕಳುಹಿಸಿದ್ದ ಭಾರತೀಯ ಅಂಚೆ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಬೆಂಗಳೂರು ನಿವಾಸಿ ಕೆ. ಶಂಕರ್ ಲಾಲ್ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಅರ್ಜಿಯನ್ನು ಆಲಿಸಿದ ಹೈಕೋರ್ಟ್, ಉಳಿತಾಯ ಯೋಜನೆಯ ಅವಧಿ ಮುಕ್ತಾಯಗೊಂಡ ಬಳಿಕವೂ ಠೇವಣಿ ಸ್ವೀಕರಿಸಿ ಬಡ್ಡಿ ನೀಡುವುದಿಲ್ಲ ಎನ್ನುವುದು ನ್ಯಾಯಸಮ್ಮತವಲ್ಲ. ಒಂದೊಮ್ಮೆ ಖಾತೆದಾರರು ಅವಧಿ ಮುಗಿದ ನಂತರ ಖಾತೆ ತೆರೆದು, ಠೇವಣಿ ಇಟ್ಟಿದ್ದಾರೆ ಎಂಬುದು ತಿಳಿದು ಬಂದ ಕೂಡಲೇ ಅದನ್ನು ಸರಿಪಡಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕಿತ್ತು. ಅದನ್ನು ಮಾಡದಿರುವುದು ಸಂಬಂಧಪಟ್ಟ ಅಧಿಕಾರಿಯ ಕರ್ತವ್ಯ ಲೋಪವಾಗಲಿದೆ. ಆದ್ದರಿಂದ ಅರ್ಜಿದಾರರಿಗೆ ಬಡ್ಡಿ ಸಹಿತ ಠೇವಣಿ ಹಣ ಹಿಂದಿರುಗಿಸಬೇಕು ಎಂದು ನಿರ್ದೇಶಿಸಿತು.
ಅಲ್ಲದೆ, ಇಂತಹ ಖಾತೆಗಳನ್ನು ನಿರ್ವಹಿಸುವ ಎಲ್ಲ ಅಂಚೆ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು. ಇದರಿಂದ ಸಾಮಾನ್ಯ ಜನರು ಅನಗತ್ಯ ವ್ಯಾಜ್ಯಗಳಿಗೆ ಹಣ ಖರ್ಚು ಮಾಡುವುದು ಉಳಿಯುತ್ತದೆ ಎಂದು ಆದೇಶದಲ್ಲಿ ನ್ಯಾಯಪೀಠ ಸೂಚಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಅರ್ಜಿದಾರ ಶಂಕರ್ಲಾಲ್ ಎಂಬುವವರು 2009 ರಲ್ಲಿ ಭಾರತೀಯ ಅಂಚೆ ಇಲಾಖೆಯಲ್ಲಿ ಎಚ್‌ಯುಎಫ್ ಪಿಪಿಎಫ್ ಖಾತೆ ತೆರೆದು ಒಟ್ಟು 12,96,412 ರೂಪಾಯಿ ಠೇವಣಿ ಇಟ್ಟಿದ್ದರು. ಅದು 2025 ಕ್ಕೆ ಮುಕ್ತಾಯವಾಗಿ ಹಣ ಬರಬೇಕಿತ್ತು. ಉಳಿತಾಯ ಖಾತೆ ತೆರೆದ 12 ವರ್ಷದ ನಂತರ ಅಂದರೆ 2021 ರ ಸೆ.23ರಂದು ಪೋಸ್ಟ್ ಮಾಸ್ಟರ್ ಪತ್ರ ಕಳುಹಿಸಿ, "ನೀವು 2009 ರಲ್ಲಿ ಎಚ್‌ಯುಎಫ್ ಪಿಪಿಎಫ್ ಖಾತೆ ತೆಗೆದಿದ್ದೀರಿ. ಆದರೆ, ಆ ಯೋಜನೆ ಅವಧಿ ಮುಗಿದಿದೆ. ಹಾಗಾಗಿ ನಿಮಗೆ ಬಡ್ಡಿ ನೀಡಲಾಗದು" ಎಂದು ತಿಳಿಸಿದ್ದರು.
ಅದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಅರ್ಜಿದಾರರು, ಠೇವಣಿ ಖಾತೆ ತೆರೆಯುವಾಗ ಯೋಜನೆ ಅವಧಿ ಮುಕ್ತಾಯವಾಗಿರುವ ಬಗ್ಗೆ ಅಂಚೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಖಾತೆ ತೆರೆದ 12 ವರ್ಷಗಳ ನಂತರ ಪತ್ರ ಬರೆದು, ಬಡ್ಡಿ ನೀಡುವುದಿಲ್ಲ ಎಂಬುದಾಗಿ ತಿಳಿಸಿರುವುದು ನಿಯಮಬಾಹಿರ. ನನಗೆ ಅನ್ಯಾಯವಾಗಿದೆ ಎಂದು ಆಕ್ಷೇಪಿಸಿದ್ದರು. ಕೋರ್ಟ್ ಇದೀಗ ಅರ್ಜಿದಾರರ ಪರ ತೀರ್ಪು ನೀಡಿದೆ.
ಕ್ಯಾನ್ಸರ್ ರೋಗಿ ಕುಟುಂಬಕ್ಕೆ ನೆರವು: ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕುಟುಂಬಕ್ಕೆ ಹಣದ ಅಗತ್ಯವಿದ್ದು, ತಮ್ಮ ಜಮೀನು ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದ ಅರ್ಜಿಗೆ ಹೈಕೋರ್ಟ್ ಅಸ್ತು ಎಂದಿದೆ. ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ)ಯಿಂದ ಅಧಿಸೂಚನೆಗೆ ಒಳಗಾಗಿದ್ದ ಒಟ್ಟು 2.3 ಎಕರೆ ಜಮೀನಿನಲ್ಲಿ ಶೇ.50 ರಷ್ಟನ್ನು ಷರತ್ತಿನ ಮೇಲೆ ಮಾರಾಟಕ್ಕೆ ಅವಕಾಶ ನೀಡಿದೆ.
ಇದನ್ನೂ ಓದಿ: ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಕುಟುಂಬಕ್ಕೆ ನೆರವಾದ ಹೈಕೋರ್ಟ್