ಬೆಂಗಳೂರು: ಮೈಸೂರು ಪೇಪರ್ ಮಿಲ್ಸ್ ಫಾರೆಸ್ಟ್ ಎಂಪ್ಲಾಯಿಸ್ ಅಸೋಸಿಯೇಶನ್ ಮತ್ತು ಶಿವಮೊಗ್ಗ ಜಿಲ್ಲಾ ಎಂಪಿಎಂ ನೌಕರರ ಸಂಘಗಳು ವರ್ಕ್‌ಮೆನ್ ಆಫ್ ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್ ಮೂಲಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಎಂಪಿಎಂ ಫಾರೆಸ್ಟ್ ಫೀಲ್ಡ್ ವರ್ಕರ್‌ಗಳಿಗೆ ಅರಣ್ಯ ವೀಕ್ಷಕರಿಗೆ ನೀಡುತ್ತಿರುವ ವೇತನಕ್ಕೆ ಸಮನಾದ ವೇತನ ಪಾತಿಸಲು ಸೂಚನೆ ನೀಡಿದೆ.
ಅರ್ಜಿದಾರರಾದ ವರ್ಕ್‌ಮೆನ್ ಆಫ್ ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್‌ನ ಸದಸ್ಯರಿಗೆ ಇಎಸ್‌ಐ, ಪಿಎಫ್ ಕಡಿತ ಮಾಡಿದ ಬಳಿಕ 12,033 ರೂಪಾಯಿ ಪೈಕಿ 10,543 ರೂಪಾಯಿ ಪಾವತಿಸಲಾಗುತ್ತಿದೆ. ಆದರೆ, ಅರಣ್ಯ ಇಲಾಖೆಯ ಫಾರೆಸ್ಟ್ ವಾಚರ್‌ಗಳಿಗೆ 18,600 ರೂ. ಮೂಲ ವೇತನ ಮತ್ತು1,116 ರು.ಗಳನ್ನು ಗೃಹ ಬಾಡಿಗೆಯ ರೂಪದಲ್ಲಿ ಪಾವತಿಸಲಾಗುತ್ತಿದೆ.
ಇದರ ಜೊತೆಗೆ ಪ್ರತ್ಯೇಕವಾಗಿ ತುಟ್ಟಿಭತ್ಯೆ ಸಹ ಇದೆ. ಹೀಗಾಗಿ, ಇಷ್ಟೇ ಮೊತ್ತವನ್ನು ಫಾರೆಸ್ಟ್ ಫೀಲ್ಡ್ ವರ್ಕರ್‌ಗಳಿಗೂ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಎಂಪಿಎಂ ನಷ್ಟದಲ್ಲಿರುವುದರಿಂದ ಕನಿಷ್ಠ ಕೂಲಿಗಿಂತ ಹೆಚ್ಚು ಕೂಲಿ ಪಾವತಿಸಲಾಗದು ಎಂಬ ಸರ್ಕಾರದ ವಾದವನ್ನು ಒಪ್ಪಲಾಗದು.
ರಾಜ್ಯ ಸರ್ಕಾರವು ಮಾದರಿ ಉದ್ಯೋಗದಾತನಾಗಿದ್ದು, ಅಗತ್ಯವಾದ ಕೂಲಿ ಪಾವತಿಸುವುದು ಅಗತ್ಯ. ಕಾರ್ಮಿಕರಿಂದ ದುಡಿಸಿಕೊಂಡು ತದನಂತರ ಸರ್ಕಾರದ ಸಂಸ್ಥೆಯು ನಷ್ಟದಲ್ಲಿರುವುದರಿಂದ ವೇತನ ಪಾವತಿಸಲಾಗದು, ಕನಿಷ್ಠ ಕೂಲಿ ಮಾತ್ರ ಪಾವತಿಸುತ್ತೇವೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಫಾರೆಸ್ಟ್ ಫೀಲ್ಡ್ ವರ್ಕರ್‌ಗಳ ಸೇವೆ ಕಾಯಂಗೊಳಿಸುವಂತೆ ಕೋರಿ ಕೈಗಾರಿಕಾ ವಿವಾದಗಳ ಕಾಯಿದೆ ಸೆಕ್ಷನ್ 10(1)(ಡಿ)ರ ಅಡಿ ಸಲ್ಲಿಸಿದ್ದ ಕೋರಿಕೆಯನ್ನು ರಾಜ್ಯ ಸರ್ಕಾರವು 2005ರ ಸೆಪ್ಟೆಂಬರ್ 22ರ ಕೈಗಾರಿಕಾ ನ್ಯಾಯ ಮಂಡಳಿಗೆ ವರ್ಗಾಯಿಸಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯ ಮಂಡಳಿಯು ಫಾರೆಸ್ಟ್ ಪ್ಲಾಂಟೇಶನ್ ವಾಚರ್‌ಗಳು ಮತ್ತು ಡ್ರೈವರ್‌ಗಳ ಹುದ್ದೆಯ ರೀತಿ ಸೇವೆ ಕಾಯಮಾತಿಗೆ ಅವರಿಗೆ (ಫೀಲ್ಡ್ ವರ್ಕರ್‌ಗಳಿಗೆ) ಹಕ್ಕಿಲ್ಲ. ಕೈಗಾರಿಕಾ ವಿವಾದಗಳ ಕಾಯಿದೆ ಅಡಿ ಲಭ್ಯವಿರುವ ಸೌಲಭ್ಯಗಳು ಮತ್ತು ಕೂಲಿಗೆ ಫಾರೆಸ್ಟ್ ಫೀಲ್ಡ್ ವರ್ಕರ್‌ಗಳು ಅರ್ಹರಾಗಿದ್ದಾರೆ.
ಆದರೆ, ಆಡಳಿತ ಮಂಡಳಿಯು ಫಾರೆಸ್ಟ್ ಫೀಲ್ಡ್ ವರ್ಕರ್‌ಗಳ ಸೇವೆಯನ್ನು ವಜಾ ಮಾಡುವಂತಿಲ್ಲ ಎಂದು 2008ರ ಜುಲೈ 25ರಂದು ನ್ಯಾಯ ಮಂಡಳಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಎಂಬಿಬಿಎಸ್ ಕೋರ್ಸ್ಗೆ ಕ್ರೀಡಾ ಕೋಟಾ ಸೇರಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ