ಬೆಂಗಳೂರು: ಲಾಕ್ಡೌನ್ ಅವಧಿಯಲ್ಲಿ ನಗರದ ಕಾಚರನಹಳ್ಳಿಯ ಸಂಡೆ ಬಜಾರ್ ಪ್ರದೇಶದಲ್ಲಿ ದುಷ್ಕರ್ಮಿಗಳು ಸುಟ್ಟು ಹಾಕಿದ ಕಾರ್ಮಿಕರ ಗುಡಿಸಲುಗಳಿಗೆ ಪರಿಹಾರ ನೀಡುವಂತೆ ಸೂಚಿರುವ ಹೈಕೋರ್ಟ್, ಪುನರ್ವಸತಿಯನ್ನೂ ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಕಾರ್ಮಿಕರ ಗುಡಿಸಲುಗಳು ಬೆಂಕಿಗಾಹುತಿಯಾದ ಕುರಿತು ವಕೀಲೆ ವೈಶಾಲಿ ಹೆಗಡೆ ಬರೆದ ಪತ್ರ ಆಧರಿಸಿ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಈ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಲಾಕ್ಡೌನ್ ಅವಧಿಯಲ್ಲಿ ಗುಡಿಸಲುಗಳಿಗೆ ಬೆಂಕಿ ಹಚ್ಚಿರುವುದನ್ನು ಗಮನಿಸಿದರೆ ಕೃತ್ಯದ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡ ಇದ್ದಂತೆ ಕಾಣಿಸುತ್ತದೆ. ಜತೆಗೆ ಸಂವಿಧಾನದ 21ನೇ ವಿಧಿಯ ಅನ್ವಯ ಗುಡಿಸಲು ವಾಸಿಗಳ ಜೀವಿಸುವ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದಿದೆ.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಉಳಿದಿರುವ ಗುಡಿಸಲುಗಳನ್ನು ಸಂರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜತೆಗೆ ಬೆಂಕಿಗಾಹುತಿಯಾದ ಗುಡಿಸಲುಗಳಲ್ಲಿ ಕಾರ್ಮಿಕರು ಕಳೆದುಕೊಂಡಿರುವ ವಸ್ತುಗಳಿಗೆ ಪರಿಹಾರ ನೀಡಬೇಕು ಮತ್ತು ಪುನರ್ವಸತಿ ಕಲ್ಪಿಸಬೇಕು. ಈ ಕುರಿತು ಕ್ರಮ ಕೈಗೊಂಡ ಬಗ್ಗೆ ಮುಂದಿನ ವಿಚಾರಣೆ ವೇಳೆ ಲಿಖಿತ ವರದಿ ನೀಡಬೇಕು ಎಂದು ಪೀಠ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಸರ್ಕಾರ ಪರ ವಕೀಲ ವಿಕ್ರಮ್ ಹುಯಿಲ್ಗೋಳ ಪೀಠಕ್ಕೆ ಮಾಹಿತಿ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇಂತಹ ಪ್ರಕರಣ ಮರುಕಳಿಸದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಗತ್ಯ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ಪ್ರಕರಣದ ಹಿನ್ನೆಲೆ: ಮಾರ್ಚ್ 28 ಮತ್ತು 30ರಂದು ನಗರದ ಕಾಚರಕನಹಳ್ಳಿ ಸಮೀಪದ ಕೊಳಗೇರಿ ಪ್ರದೇಶದಲ್ಲಿದ್ದ 90ಕ್ಕೂ ಹೆಚ್ಚು ಗುಡಿಸಲುಗಳು ಬೆಂಕಿಗೆ ಆಹುತಿಯಾಗಿದ್ದವು. ಈ ಕುರಿತು ಮೇ 29ರಂದು ವಕೀಲೆ ವೈಶಾಲಿ ಹೆಗಡೆ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದರು. ಲಾಕ್ಡೌನ್ ಸಡಿಲಗೊಂಡ ಸಂದರ್ಭದಲ್ಲಿ ಕಲಬುರಗಿ ಮೂಲದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದಾಗ ಅವರ ಗುಡಿಸಲುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಕೆಲ ಪ್ರಭಾವಿಗಳು ಅಲ್ಲಿನ ಭೂಮಿಯನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಅಧಿಕಾರಿಗಳು ಘಟನೆ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯವಾಗಿ ಈ ಘಟನೆ ಕಾರ್ಮಿಕರ ಜೀವಿಸುವ ಹಕ್ಕನ್ನು ಕಸಿದುಕೊಂಡಿದೆ. ಹೀಗಾಗಿ ಘಟನೆ ಸಂಬಂಧ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.