ಬೆಂಗಳೂರು: ಎಂಜಿನೀಯರಿಂಗ್ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಆಫ್ ಲೈನ್ ಜೊತೆಗೆ ಆನ್ಲೈನ್ ಮೂಲಕವೂ ನೀಡುವ ಬಗ್ಗೆ ಮರು ಪರಿಶೀಲಿಸುವಂತೆ ಹೈಕೋರ್ಟ್, ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ ನಿರ್ದೇಶಿಸಿದೆ.
ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸುವುದನ್ನು ಪ್ರಶ್ನಿಸಿ, ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯದ(ಬಿಐಟಿ) ವಿದ್ಯಾರ್ಥಿ ವೇದಾಂತ್ ಮತ್ತಿತರರು ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ.ಸುನಿಲ್ ದತ್ ಯಾದವ್ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.
ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸುವ ಮುನ್ನ ವಿದ್ಯಾರ್ಥಿಗಳು ಮುಂದಿಟ್ಟಿರುವ ಎಲ್ಲ ಪರ್ಯಾಯ ಆಯ್ಕೆಗಳನ್ನು ವಿಶ್ವವಿದ್ಯಾಲಯ ಗಂಭೀರವಾಗಿ ಪರಿಗಣಿಸಬೇಕು. ಸಾಧ್ಯವಾದಷ್ಟು ವಿದ್ಯಾರ್ಥಿಗಳು ನೀಡಿರುವ ಸಲಹೆಗಳು ಮತ್ತು ತಾಂತ್ರಿಕ ಅಗತ್ಯತೆಗಳಿಗೆ ಸಂಬಂಧಿಸಿದಂತೆ ತಜ್ಞರು ನೀಡುವ ಸಲಹೆಗಳನ್ನು ಪರಿಗಣಿಸಿದ ನಂತರವೇ ವಿವಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಪೀಠ ನಿರ್ದೇಶಿಸಿದೆ.
ಪ್ರಸಕ್ತ ಅಂತಿಮ ಪದವಿ ಪರೀಕ್ಷೆಗಳು ಸೆಪ್ಟೆಂಬರ್ 15ರೊಳಗೆ ಪೂರ್ಣಗೊಳ್ಳಬೇಕಾಗಿದ್ದು, ವಿವಿಯು ತನ್ನ ನಿರ್ಧಾರವನ್ನು ಆಗಸ್ಟ್ 25ರೊಳಗೆ ತಿಳಿಸುವಂತೆ ಸೂಚಿಸಿದೆ. ವಿಟಿಯು ಪರ ವಾದಿಸಿದ್ದ ವಕೀಲರು ಆನ್ಲೈನ್ ಮೂಲಕ ಪರೀಕ್ಷೆಗಳನ್ನು ನಡೆಸಲು ಸಾಕಷ್ಟು ಸವಾಲುಗಳು ಹಾಗೂ ಸಮಸ್ಯೆಗಳಿವೆ. ಹೀಗಾಗಿ ಎಂದಿನಂತೆ ಆಫ್ ಲೈನ್ನಲ್ಲಿ ಪರೀಕ್ಷೆ ನಡೆಸುತ್ತೇವೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪೀಠ, ವಿಟಿಯು ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ ವಿದ್ಯಾರ್ಥಿಗಳ ಹಿತರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಕೋವಿಡ್ ನಂತಹ ಸಂಕಷ್ಟದ ಕಾಲದಲ್ಲಿ ಲಭ್ಯವಿರುವ ತಾಂತ್ರಿಕ ಪರಿಹಾರಗಳನ್ನು ಬಳಸಿಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಹೇಳಿದೆ. ಹಿಂದಿನ ವಿಚಾರಣೆ ವೇಳೆ ಮೌಖಿಕ ಪರೀಕ್ಷೆಯನ್ನು ಆನ್ ಲೈನ್ ಮೂಲಕ ನಡೆಸಿದ್ದೀರಿ ಎಂದ ಮೇಲೆ ಲಿಖಿತ ಪರೀಕ್ಷೆ ನಡೆಸಲು ಅಡ್ಡಿಯೇನು ಎಂದು ಪೀಠ ಪ್ರಶ್ನಿಸಿತ್ತು.