ಬೆಂಗಳೂರು: ವೃತ್ತಿಪರವಲ್ಲದ ಕೋರ್ಸ್ಗಳಿಗೆ ನೀಡಿದ ಸಡಿಲಿಕೆಯನ್ನು ಕಾನೂನು ಕೋರ್ಸ್ಗಳಿಗೆ ನೀಡಲಾಗದು. ಸಾಂಕ್ರಾಮಿಕ ರೋಗದ ಕಾರಣಕ್ಕಾಗಿ ಕಾನೂನು ಶಿಕ್ಷಣದಲ್ಲಿನ ಗುಣಮಟ್ಟ ಕಾಯ್ದುಕೊಳ್ಳುವುದನ್ನು ಬಿಟ್ಟುಕೊಡಲಾಗದು ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ತನ್ನ 3 ವರ್ಷದ ಎಲ್ಎಲ್ಬಿ ಕೋಸ್ನ 2 ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವಂತೆ ನಿರ್ದೇಶಿಸಿದೆ.
ಈ ಕುರಿತಂತೆ ವಿವಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಹಾಗೂ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗಡೆ ಅವರಿದ್ಧ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ವೃತ್ತಿಪರ ಕೋರ್ಸ್ಗಳಲ್ಲಿ ವಿನಾಯಿತಿ ನೀಡಲಾಗದು. ವಿಶೇಷವಾಗಿ ಕಾನೂನು, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ನಂತಹ ಕ್ಷೇತ್ರಗಳಲ್ಲಿ ಪರೀಕ್ಷೆಗಳಿಂದ ವಿನಾಯಿತಿ ನೀಡುವುದು ಸರಿಯಲ್ಲ. ಅಂತೆಯೇ, ಕಾನೂನು ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗದು. ಇನ್ನು ಕೋರ್ಸ್ನ ಪಠ್ಯಕ್ರಮ ಹಾಗೂ ಪರೀಕ್ಷಾ ವಿಧಾನಗಳನ್ನು ಶಿಕ್ಷಣ ತಜ್ಞರು ನಿರ್ಧರಿಸಬೇಕೇ ಹೊರತು ವಿದ್ಯಾರ್ಥಿಗಳಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇದೇ ವೇಳೆ, ಪರೀಕ್ಷೆಯನ್ನು ಹೇಗೆ ನಡೆಸಬೇಕು (ಅಂದರೆ ಆನ್ಲೈನ್/ಆಫ್ಲೈನ್/ಬ್ಲೆಂಡೆಡ್/ಆನ್ಲೈನ್ ತೆರೆದ ಪುಸ್ತಕ ಪರೀಕ್ಷೆ/ನಿಯೋಜನೆ ಆಧಾರಿತ ಮೌಲ್ಯಮಾಪನ/ಸಂಶೋಧನಾ ಪತ್ರಿಕೆಗಳು) ಎಂಬ ಬಗ್ಗೆ ವಿವಿ 10 ದಿನಗಳಲ್ಲಿ ನಿರ್ಧರಿಸಿ, 3 ವರ್ಷದ ಎಲ್ಎಲ್ಬಿಯ 2 ಮತ್ತು 4ನೇ ಸೆಮಿಸ್ಟರ್ ಗಳಿಗೆ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.
ಕೋವಿಡ್ ಸೋಂಕು ತೀವ್ರವಿದ್ದ ಸಂದರ್ಭದಲ್ಲಿ ವಿವಿ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಯುಜಿಸಿ, ವಿದ್ಯಾರ್ಥಿಗಳು ಹಿಂದಿನ ಪರೀಕ್ಷೆಗಳಲ್ಲಿ ಪಡೆದ ಅಂಕ ಹಾಗೂ ಆಂತರಿಕ ಮೌಲ್ಯಮಾಪನ ಆಧರಿಸಿ ಮುಂದಿನ ತರಗತಿಗೆ ಬಡ್ತಿ ನೀಡುವಂತೆ ಹೇಳಿದ್ದರೂ ಕೆಎಸ್ಎಲ್ಯು ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸಿರುವ ಕ್ರಮ ಸರಿಯಲ್ಲ. ಹೀಗಾಗಿ ಯುಜಿಸಿ ಸೂಚನೆಯಂತೆ ಪರೀಕ್ಷೆ ನಡೆಸದಿರಲು ವಿವಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಕಳೆದ ಡಿಸೆಂಬರ್ 14ರಂದು 2 & 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸದಂತೆ ವಿವಿಗೆ ಆದೇಶಿಸಿತ್ತು. ಯುಜಿಸಿ ಸುತ್ತೋಲೆ ಪಾಲಿಸುವಂತೆ ಸೂಚಿಸಿತ್ತು. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿವಿ ಮೇಲ್ಮನವಿ ಸಲ್ಲಿಸಿತ್ತು. ಭಾರತೀಯ ವಕೀಲರ ಪರಿಷತ್ತು ಕಾನೂನು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸುವಂತೆ ಸುತ್ತೋಲೆ ಮೂಲಕ ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ಪರೀಕ್ಷೆ ನಡೆಸಲು ಸಮ್ಮತಿಸಬೇಕು ಎಂದು ವಿವಿ ಮನವಿ ಮಾಡಿತ್ತು.
ಇದನ್ನೂ ಓದಿ : ಕುಡಿತದ ಚಟ.. ಸ್ವಂತ ಮಗಳ ಮೇಲಿನ ಅತ್ಯಾಚಾರಕ್ಕೆ ಸಾಥ್ ನೀಡಿದ ತಾಯಿ: ಕೊನೆಗೆ ಆಗಿದ್ದೇನು..?