ಬೆಂಗಳೂರು: ಮುಸ್ಲಿಮರಲ್ಲಿ ಜಾರಿಯಲ್ಲಿದ್ದ ತ್ರಿವಳಿ ತಲಾಖ್ ನಿಷೇಧಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾನೂನಿಗೆ ತಡೆ ಕೋರಬೇಕೆಂದು ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಸರ್ಕಾರ ಸೇರಿ ಎಲ್ಲ ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತು ಬೆಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಆರೀಫ್ ಜಮೀಲ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾ.ಎ.ಎಸ್.ಓಕಾ ಮತ್ತು ನ್ಯಾ.ಮೊಹ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿದಾರ ಪರ ವಕೀಲರು ತ್ರಿವಳಿ ತಲಾಕ್ ನೀಡಿದವರಿಗೆ ಮೂರು ವರ್ಷ ಶಿಕ್ಷೆ ನಿಗದಿಪಡಿಸಿ ಕೇಂದ್ರ ಸರ್ಕಾರ ರೂಪಿಸಿದೆ. ಇದು ಮುಸ್ಲಿಂ ಮಹಿಳೆಯರ ಮದುವೆಯ ಮೇಲಿನ ಹಕ್ಕುಗಳ ಸಂರಕ್ಷಣೆ ಕಾಯ್ದೆ ಸಂವಿಧಾನದ ಪರಿಚ್ಛೇದ 13, 14, 15, 21 ಮತ್ತು 25ಕ್ಕೆ ವಿರುದ್ಧವಾಗಿದೆ. ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಕಾನೂನು ಬಾಹಿರ ಎಂದು ಘೋಷಿಸಿದ ಮೇಲೆ ಕಾಯ್ದೆಯನ್ನು ರೂಪಿಸುವ ಅಗತ್ಯ ಕೇಂದ್ರಕ್ಕೆ ಇರಲಿಲ್ಲ. ಒಂದು ನಿರ್ದಿಷ್ಟ ಸಮುದಾಯವನ್ನು ಟಾರ್ಗೆಟ್ ಮಾಡಿ ಕಾಯ್ದೆಯನ್ನ ಕೇಂದ್ರ ಸರ್ಕಾರ ರೂಪಿಸಿದೆ ಎಂದು ಅರ್ಜಿದಾರರು ಆರೋಪ ಮಾಡಿದರು. ವಿಚಾರಣೆಯನ್ನ ಆಲಿಸಿದ ನ್ಯಾಯಾಲಯ ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡಿಕೆ ಮಾಡಿದೆ.