ಬೆಂಗಳೂರು: ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶಿಸಿದೆ.
ಬೆಂಗಳೂರಿನ ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಇತ್ತೀಚೆಗೆ ರಸ್ತೆ ಗುಂಡಿಯಿಂದ ಸಂಭವಿಸಿದ ಅಪಘಾತದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಸಾವಿಗೀಡಾದ ವಿಚಾರವನ್ನು ಉಲ್ಲೇಖಿಸಿದ ಪೀಠ, ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಹಲವು ಬಾರಿ ನಿರ್ದೇಶನ ನೀಡಿದೆ. ಆದರೂ ರಸ್ತೆಗಳಲ್ಲಿನ ಗುಂಡಿಗಳು ಹಾಗೇ ಇವೆ. ಇದರಿಂದ ವಾಹನ ಸವಾರರು ಅಪಘಾತಕ್ಕೀಡಾಗಿ ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆ ಗುಂಡಿಗಳಿಂದ ಜನ ಸಾಯುವುದು ಎಂದರೇನು ಎಂದು ಬಿಬಿಎಂಪಿಗೆ ಪ್ರಶ್ನಿಸಿದ ಪೀಠ, ಅವರ ಮನೆಯವರ ಪರಿಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳಿ ಎಂದು ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೇ, ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಬೇಕು ಎಂಬ ಇಚ್ಛೆ ಬಿಬಿಎಂಪಿಗೆ ಇರಬೇಕು. ಈ ನಿಟ್ಟಿನಲ್ಲಿ ಪಾಲಿಕೆ ನಿರ್ಣಯ ಕೈಗೊಳ್ಳಬೇಕು.
ನಗರದಲ್ಲಿ ಎಷ್ಟು ರಸ್ತೆ ಗುಂಡಿಗಳಿವೆ?, ಎಷ್ಟು ಗುಂಡಿ ಮುಚ್ಚಲಾಗಿದೆ ಎಂಬ ವಸ್ತುಸ್ಥಿತಿ ವರದಿ ನ್ಯಾಯಾಲಯಕ್ಕೆ ಬೇಕಿಲ್ಲ. ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವ ವೇಳಾಪಟ್ಟಿ ಬೇಕು. ಆದ್ದರಿಂದ ಗುಂಡಿಗಳನ್ನು ಆದ್ಯತೆ ಮೇರೆಗೆ ಮುಚ್ಚಲು ಕ್ರಿಯಾ ಯೋಜನೆ ರೂಪಿಸಬೇಕು ಹಾಗೂ ಆ ಯೋಜನೆಯನ್ನು ಯಾವ ಕಾಲ ಮಿತಿಯೊಳಗೆ ಅನುಷ್ಠಾನಕ್ಕೆ ತರಲಾಗುತ್ತದೆ ಎಂಬ ಬಗ್ಗೆ ಮಾ. 2ರೊಳಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.