ಬೆಂಗಳೂರು: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾಗೆ ಚಿಕಿತ್ಸೆ ನೀಡುವ ಕುರಿತು ದರ ಪಟ್ಟಿ ಪ್ರಕಟಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾಗೆ ಚಿಕಿತ್ಸೆ ನೀಡಲು ಹೆಚ್ಚಿನ ಶುಲ್ಕವನ್ನು ರೋಗಿಗಳಿಂದ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಓದಿ: ಸಾಗರೋತ್ತರ ವಿದ್ಯಾರ್ಥಿಗಳನ್ನು ಸಾಮಾನ್ಯ ಭಾರತೀಯರಂತೆ ಪರಿಗಣಿಸಿ: ಹೈಕೋರ್ಟ್ ಮಹತ್ವದ ಆದೇಶ
ಪೀಠ ತನ್ನ ನಿರ್ದೇಶನದಲ್ಲಿ, ಸರ್ಕಾರ ಚಿಕಿತ್ಸಾ ದರ ನಿಗದಿ ಮಾಡಿ 2020ರ ಜೂನ್ 23ರಂದು ಅಧಿಸೂಚನೆ ಹೊರಡಿಸಿದೆ. ಅದನ್ನು ಮೀರಿ ಯಾವುದೇ ಖಾಸಗಿ ಅಸ್ಪತ್ರೆಗಳು ಹೆಚ್ಚಿನ ಶುಲ್ಕ ಪಡೆಯುವಂತಿಲ್ಲ. ಸರ್ಕಾರ ಶಿಫಾರಸು ಮಾಡುವ ರೋಗಿಗಳು ಯಾವುದೇ ಶುಲ್ಕ ಪಾವತಿಸುವಂತಿಲ್ಲ ಎಂಬ ಫಲಕವನ್ನು ಆಸ್ಪತ್ರೆಗಳು ಅಳವಡಿಬೇಕು. ಫಲಕದಲ್ಲಿ ಪಿಪಿಇ ಕಿಟ್ ಅಥವಾ ಇನ್ನಿತರ ಸಲಕರಣೆಗಳಿಗೂ ಶುಲ್ಕ ಪಾವತಿಸುವಂತಿಲ್ಲ ಎಂಬುದನ್ನೂ ನಮೂದಿಸಿರಬೇಕು. ಈ ಸಂಬಂಧ ರಾಜ್ಯ ಸರ್ಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕು ಎಂದು ಪೀಠ ತಿಳಿಸಿತು.
ಸ್ಪಷ್ಟನೆಗೆ ನಿರ್ದೇಶನ
ಅಲ್ಲದೆ, ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಪ್ರತಿನಿತ್ಯ 1 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ಕೋವಿಡ್ ವರದಿ ವಿಳಂಬ ಆಗುತ್ತಿರುವ ಬಗ್ಗೆ ಸರ್ಕಾರ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.