ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದ ಮೂಲಕ ಪಡೆದ ಬಿ.ಟೆಕ್ ಪದವಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (AICTE) ಅನುಮೋದನೆ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಸಹಾಯಕ ಎಂಜಿನಿಯರ್ ನೌಕರಿ ಕಳೆದುಕೊಂಡಿದ್ದ ವ್ಯಕ್ತಿಗೆ ಮತ್ತೆ ಉದ್ಯೋಗ ನೀಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಚಿಕ್ಕಮಗಳೂರಿನ ಕಲ್ಯಾಣ ನಗರ ನಿವಾಸಿ ಕೆ.ಆರ್ ದೇವರಾಜು ಎಂಬುವರು ಕೆಎಸ್ಒಯುನಿಂದ ಬಿ.ಟೆಕ್ ಪದವಿ ಪಡೆದು ಅದರ ಆಧಾರದ ಮೇಲೆ ಮಂಡಳಿಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿ 5 ವರ್ಷ ಸೇವೆ ಸಲ್ಲಿಸಿದ್ದರು. ಆದರೆ. ಕೆಎಸ್ಒಯು ನೀಡಿದ್ದ ಬಿಟೆಕ್ ಪದವಿಗೆ ಎಐಸಿಟಿಇ ಮಾನ್ಯತೆ ನೀಡದ ಹಿನ್ನೆಲೆಯಲ್ಲಿ ಮಂಡಳಿ ಏಕಾಏಕಿ ಕೆಲಸದಿಂದ ತೆಗೆದು ಹಾಕಿತ್ತು. ಉದ್ಯೋಗಕ್ಕೆ ಕುತ್ತು ಬಂದ ಹಿನ್ನೆಲೆಯಲ್ಲಿ ದೇವರಾಜು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ, ಯುಜಿಸಿ 2015ರ ಜೂನ್ 16ರಂದು ಹೊರಡಿಸಿರುವ ಪ್ರಕಟಣೆಯಂತೆ ಕೆಎಸ್ಒಯು 2012-13ನೇ ಸಾಲಿನವರೆಗೆ ನೀಡಿರುವ ಪದವಿ ಪ್ರಮಾಣ ಪತ್ರಗಳು ಮಾನ್ಯತೆ ಹೊಂದಿಲ್ಲದಿರಬಹುದು.
ಆದರೆ, ಸರ್ಕಾರ ವಿವಿ ನೀಡಿರುವ ಪದವಿ ಪ್ರಮಾಣ ಪತ್ರಗಳಿಗೆ ಮಾನ್ಯತೆ ನೀಡಿದೆ. ದೇವರಾಜ್ ಸಹಾಯಕ ಎಂಜಿನಿಯರ್ ಹುದ್ದೆಯಲ್ಲಿ 5 ವರ್ಷ ಸೇವೆ ಸಲ್ಲಿಸಿದ್ದು, ಸಿವಿಲ್ ಎಂಜಿನಿಯರ್ ಡಿಪ್ಲೊಮಾ ಪದವಿ ಪಡೆದಿದ್ದು, ಅದಕ್ಕೆ ಮಾನ್ಯತೆಯಿದೆ. ಹಾಗಾಗಿ, ಡಿಪ್ಲೊಮಾ ಆಧರಿಸಿ ದೇವರಾಜ್ಗೆ ಕಿರಿಯ ಎಂಜಿನಿಯರ್ ಹುದ್ದೆ ನೀಡುವಂತೆ ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿದಾರರ ಪರ ವಕೀಲರು ಕೋರಿದ್ದಾರೆ. ಹೀಗಾಗಿ, ಅರ್ಜಿದಾರರ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಪದವಿ ಪರಿಗಣಿಸಿ ಕಿರಿಯ ಇಂಜಿನಿಯರ್ ಹುದ್ದೆ ನೀಡಬೇಕು ಎಂದು ಮಂಡಳಿಗೆ ಹೈಕೋರ್ಟ್ ಆದೇಶಿಸಿದೆ.