ಬೆಂಗಳೂರು: ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ-ಸ್ನಾತಕೋತ್ತರ(ನೀಟ್-ಪಿಜಿ)ಕೋರ್ಸ್ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪ್ರವರ್ಗವನ್ನು ಸರಿಯಾಗಿ ನಮೂದಿಸುವಲ್ಲಿ ತಪ್ಪೆಸಗಿದ್ದ ವಿದ್ಯಾರ್ಥಿನಿಯ ನೆರವಿಗೆ ಹೈಕೋರ್ಟ್ ಧಾವಿಸಿದೆ. ಅಲ್ಲದೆ, ಪ್ರವರ್ಗದ ಹೆಸರು ಬದಲಾಯಿಸಲು ಅವಕಾಶ ಮಾಡಿಕೊಟ್ಟಿದ್ದು, ಆ ವಿದ್ಯಾರ್ಥಿನಿ ಇತರೆ ಹಿಂದುಳಿದ ವರ್ಗದ ಕೋಟಾದಡಿ ಜೇಷ್ಠತಾ ಪಟ್ಟಿಯಲ್ಲಿ ಸ್ಥಾನ ಪಡೆಯಲು ನೆರವಾಗಿದೆ.
ಡಾ. ಲಕ್ಷ್ಮೀ ಪಿ.ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ, ಅರ್ಜಿ ನಮೂನೆ ಕಲಂ 7 ರಲ್ಲಿನ ಜನರಲ್ ಎಂದು ನಮೂದಿಸಿದ್ದನ್ನು ಒಬಿಸಿ ಎಂದು ತಿದ್ದುಪಡಿ ಮಾಡಲು ಅವಕಾಶ ನೀಡುವಂತೆ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಸೂಚನೆ ನೀಡಿದೆ. ಜೊತೆಗೆ, ನ್ಯಾಯಾಲಯ ಅರ್ಜಿದಾರರ ಹೆಸರನ್ನು ಒಬಿಸಿಯ ಜೇಷ್ಠತಾ ಪಟ್ಟಿಯಲ್ಲಿ ಪರಿಗಣಿಸಿ ಅದರಂತೆ ಅವರ ಹೆಸರು ಸೇರ್ಪಡೆ ಮಾಡಬೇಕು ಎಂದೂ ಸಹ ಆದೇಶಿಸಿದೆ.
ವಿಚಾರಣೆ ವೇಳೆ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ ವಾದಿಸಿ, ಬಹುತೇಕ ಅರ್ಜಿದಾರರು ಅರ್ಜಿಗಳನ್ನು ಭರ್ತಿ ಮಾಡುವಾಗ ದೋಷಗಳಾಗಿರುತ್ತವೆ. ಅವು ಉಡಾಫೆಯ ಮೇಲೆ ದೋಷಗಳಾಗಿರುತ್ತವೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ಇದನ್ನು ತಳ್ಳಿಹಾಕಿರುವ ನ್ಯಾಯಪೀಠ, ಉಡಾಫೆಯಿಂದ ತಪ್ಪುಗಳಾಗುತ್ತವೆ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಹೀಗಾಗಿ ಅದನ್ನು ಒಪ್ಪಲಾಗದು ಎಂದು ತಿಳಿಸಿದೆ. ಅರ್ಜಿದಾರರು ತಮ್ಮ ಹೆಸರನ್ನು ಹಲವು ಕೆಟಗರಿಯಡಿ ನಮೂದಿಸಲು ಮನವಿ ಮಾಡಿಲ್ಲ. ಅವರು ಕೇಳಿರುವುದು ಒಬಿಸಿಯ- 3ಎ ಕ್ಯಾಟಗರಿಯಡಿ ಸೇರ್ಪಡೆ ಮಾಡಬೇಕೆಂದು ಮಾತ್ರ ಕೋರಿದ್ದಾರೆ. ಹಾಗಾಗಿ ಆ ಕೆಟಗರಿಯಡಿ ಜೇಷ್ಠತಾ ಪಟ್ಟಿ ಪರಿಷ್ಕರಿಸಿದರೆ ಅರ್ಜಿದಾರರು ಕೂಡ ಸ್ಥಾನ ಪಡೆದು ಪ್ರವೇಶಕ್ಕೆ ಅರ್ಹತೆ ಪಡೆಯುತ್ತಾರೆ. ಕೌನ್ಸಲಿಂಗ್ ಮುಕ್ತಾಯವಾಗಲು ಇನ್ನೂ 60 ದಿನ ಇದೆ. ಹಾಗಾಗಿ ಅರ್ಜಿದಾರರಿಗೆ ಒಂದು ಅವಕಾಶ ಮಾಡಿಕೊಡುವುದು ನ್ಯಾಯೋಚಿತವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ ಏನು? ಅರ್ಜಿದಾರರು ಮೂಲತಃ ಸಾಮಾನ್ಯ ಪ್ರವರ್ಗಕ್ಕೆ ಸೇರಿದ್ದು(ಒಕ್ಕಲಿಗ) ಅದು ಕರ್ನಾಟಕ ರಾಜ್ಯದಲ್ಲಿ ಒಬಿಸಿ ಕೆಟಗರಿಯಡಿ ಬರುತ್ತದೆ. ಆದರೆ ಅವರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ತಾವೇ ಒಕ್ಕಲಿಗ ಜಾತಿ ನಮೂದಿಸಿದ್ದರೂ ಕೆಟಗರಿ ವಿಭಾಗದಲ್ಲಿ ಕಣ್ತಪ್ಪಿ ಜನರಲ್ ಮೆರಿಟ್ ಕೆಟಗರಿ ಎಂದು ಆಯ್ಕೆ ಮಾಡಿದ್ದರು. ಆನಂತರ ಅವರಿಗೆ ತಮ್ಮ ಪ್ರಮಾದದ ಅರಿವಾಗಿತ್ತು. ಹಾಗಾಗಿ ಅವರು ಆ ತಪ್ಪನ್ನು ಸರಿಪಡಿಸಿಕೊಳ್ಳಲು ಸಂಬಂಧಿಸಿದ ಮಂಡಳಿಗೆ ಮನವಿ ಸಲ್ಲಿಸಿದ್ದರು. ಆದರೆ ಮಂಡಳಿ ಅವರ ಮನವಿಯನ್ನು ಪುರಸ್ಕರಿಸಲಿಲ್ಲ. ಇದರಿಂದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಆರೋಪ.. ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧದ ಶಿಕ್ಷೆ ರದ್ದು ಮಾಡಿದ ಹೈಕೋರ್ಟ್