ಬೆಂಗಳೂರು: ಮತದಾರ ಚೀಟಿಯಲ್ಲಿನ ಸಹಿ ನಕಲು ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಿಂದ ಮಾಜಿ ಶಾಸಕ ಅಶೋಕ್ ಖೇಣಿ ಮತ್ತವರ ಸಹೋದರ ಸಂಜಯ್ ಖೇಣಿ ಅವರನ್ನು ಖುಲಾಸೆಗೊಳಿಸಲು ನಿರಾಕರಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಪ್ರಕರಣವನ್ನು ಮರು ಪರಿಗಣಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಪ್ರಕರಣದಿಂದ ಖುಲಾಸೆಗೊಳಿಸಲು ನಿರಾಕರಿಸಿದ್ದ ಬೆಂಗಳೂರಿನ 62ನೇ ಎಸಿಎಂಎಂ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಖೇಣಿ ಸಹೋದರರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ: 2013ರ ಏ. 1ರಂದು ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸುವಂತೆ ಕೋರಿ ಅಶೋಕ್ ಖೇಣಿ ಸಲ್ಲಿಸಿದ್ದ ಫಾರ್ಮ್ 6ರಲ್ಲಿ ಅವರು ಸಹಿ ಮಾಡಿರಲಿಲ್ಲ. ಬದಲಿಗೆ ಅಶೋಕ್ ಖೇಣಿ ಅವರ ಸಹಿಯನ್ನು ಅವರ ಸಹೋದರ ಸಂಜಯ್ ಖೇಣಿ ನಕಲು ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಶೋಕ್ ಖೇಣಿ ವಿದೇಶ ಪ್ರವಾಸದಲ್ಲಿದ್ದರು ಎಂದು ಆರೋಪಿಸಿ ಟಿ. ಜೆ ಅಬ್ರಹಾಂ ಖಾಸಗಿ ದೂರು ದಾಖಲಿಸಿದ್ದರು.
ದೂರು ಆಧರಿಸಿ, ಖೇಣಿ ಸಹೋದರರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳು ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 31 (ಎ) ಮತ್ತು (ಬಿ) ಜತೆಗೆ, ಚುನಾವಣಾ ನಿಯಮಗಳ ನೋಂದಣಿ ನಿಯಮ 26ರ ಅಡಿ ಪ್ರಕರಣ ದಾಖಲಾಗಿತ್ತು. ತಮ್ಮ ವಿರುದ್ಧ ಆರೋಪ ನಿಗದಿಪಡಿಸಲು ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಪ್ರಕರಣದಿಂದ ಖುಲಾಸೆಗೊಳಿಸುವಂತೆ ಕೋರಿ ಖೇಣಿ ಸಹೋದರರು ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಓದಿ: ನಕಲಿ ದಾಖಲೆ ನೀಡಿ ಶ್ಯೂರಿಟಿ : ಆನ್ಲೈನ್ ಮೂಲಕ ದಾಖಲೆಗಳ ಪರಿಶೀಲನೆಗೆ ಹೈಕೋರ್ಟ್ ನಿರ್ದೇಶನ