ಬೆಂಗಳೂರು: ಲುಲು ಇಂಟರ್‌ನ್ಯಾಷನಲ್ ಶಾಪಿಂಗ್ ಮಾಲ್ ಪ್ರೈವೇಟ್ ಲಿಮಿಟೆಡ್ ಮತ್ತು ಕೊಲುಲು ಸ್ಪೋರ್ಟ್ಸ್ ಲಿಮಿಟೆಡ್ ಕಂಪನಿ ನಡುವಿನ ‘ಲುಲು’ ವ್ಯಾಪಾರಿ ಚಿಹ್ನೆ(ಟ್ರೇಡ್ ಮಾರ್ಕ್)ಗೆ ಸಂಬಂಧಿಸಿದ ಪ್ರಕರಣವನ್ನು ಹೊಸದಾಗಿ ಪರಿಶೀಲಿಸಿ ಸೂಕ್ತ ಆದೇಶ ಹೊರಡಿಸುವಂತೆ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಪ್ರಾದೇಶಿಕ ನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ತನಗೆ ‘ಲುಲು’ ಶೀರ್ಷಿಕೆ ಬಳಕೆಗೆ ನಿರ್ಬಂಧ ವಿಧಿಸಿದ್ದ ಪ್ರಾದೇಶಿಕ ನಿರ್ದೇಶನಕರ ಆದೇಶವನ್ನು ಪ್ರಶ್ನಿಸಿ ಕೊಲುಲು ಕಂಪನಿಯ ನಿರ್ದೇಶಕ ನಿಕುಂಜ್ ಖಂಡೇಲ್ವಾಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ಮಾಡಿದೆ. ಜೊತೆಗೆ, ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಪ್ರಾದೇಶಿಕ ನಿರ್ದೇಶಕರು ಅರ್ಜಿದಾರರಿಗೆ ‘ಲುಲು’ ಪದ ಬಳಕೆಗೆ ನಿರ್ಬಂಧ ವಿಧಿಸಿ 2022ರ ಮಾ.30ರಂದು ಹೊರಡಿಸಿದ್ದ ಆದೇಶ ರದ್ದುಗೊಳಿಸಿ ಆದೇಶಿಸಿದೆ.
ಹೊಸದಾಗಿ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಪ್ರಾದೇಶಿಕ ನಿರ್ದೇಶಕರು ಕಂಪನಿ ಕಾಯಿದೆ ಪ್ರಕಾರ ಪರಿಶೀಲಿಸಿ, ಉಭಯ ಪಕ್ಷಗಾರರ ವಾದ ಆಲಿಸಿ ತಮ್ಮ ವಿವೇಚನೆ ಬಳಸಿ ಸೂಕ್ತ ಆದೇಶ ಹೊರಡಿಸುವವರೆಗೆ ಮೂರು ತಿಂಗಳು ಉಭಯ ಪಕ್ಷಗಾರರು ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ನ್ಯಾಯಾಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿ ವಕೀಲ ಮನು ಕುಲಕರ್ಣಿ, ಕೊಲುಲು ಸ್ಟೋರ್ಟ್ಸನ್ನು ಕಂಪನಿ ಕಾಯಿದೆಯಡಿ ಏಪ್ರಿಲ್ 2018ರಲ್ಲಿ ನೋಂದಣಿ ಮಾಡಲಾಗಿದೆ. ಕ್ರೀಡಾ ತರಬೇತಿ ಕ್ರೀಡಾಕೂಟಗಳು ಮತ್ತು ಫಿಟ್‌ನೆಸ್ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಲುಲು ಮತ್ತು ಕೊಲುಲು ಪದಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಹೀಗಾಗಿ ಪ್ರಾದೇಶಿಕ ನಿರ್ದೇಶಕರು ಕೊಲುಲು ವ್ಯಾಪಾರಿ ಚಿಹ್ನೆ ಉದ್ದೇಶವನ್ನು ಸರಿಯಾಗಿ ಪರಿಶೀಲನೆ ನಡೆಸಿಲ್ಲ. ಆದೇಶ ಹೊರಡಿಸುವಾಗ ವಿವೇಚನೆ ಬಳಸಿಲ್ಲ. ಎರಡೂ ಪಕ್ಷಗಾರರ ವಾದಾಂಶಗಳನ್ನು ದಾಖಲಿಸಿ ಕಾರಣ ಸಹಿತ ಆದೇಶ ಹೊರಡಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಲುಲು ಪರ ವಕೀಲರು, ವಿಶ್ವದಾದ್ಯಂತ ಪ್ರಸಿದ್ದ ಹೆಸರನ್ನು ಹೊಂದಿದ್ದ ವ್ಯಾಪಾರಿ ಚಿಹ್ನೆಯಡಿ ನೋಂದಣಿಯಾಗಿದೆ. ವ್ಯಾಪಾರಿ ಚಿಹ್ನೆ ಕಾಯಿದೆ ಸೆಕ್ಷನ್ 16ರ ಪ್ರಕಾರ ಒಂದೇ ರೀತಿಯಲ್ಲಿ ಎರಡು ಹೆಸರುಗಳು ಅಸ್ತಿತ್ವದಲ್ಲಿ ಇರಲು ಅವಕಾಶವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ: ಲುಲು ಮಾಲ್, ತನ್ನ ಹೆಸರಿಗೆ ಸಮನಾದ ಶೀರ್ಷಿಕೆಯನ್ನು ಅರ್ಜಿದಾರರು ಬಳಕೆ ಮಾಡುತ್ತಿದ್ದಾರೆಂದು ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಆ ದೂರು ಆಧರಿಸಿ ಕಂಪನಿ ಕಾಯಿದೆ ಸೆಕ್ಷನ್ 16ರಡಿ ಪ್ರಾಧಿಕಾರ, ಅರ್ಜಿದಾರರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಅಲ್ಲದೆ, ಲುಲು ಪದ ಬಳಕೆ ಮಾಡದಂತೆ ನಿರ್ಬಂಧ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು.
ಇದನ್ನೂ ಓದಿ: ಬಿಜೆಪಿಯಿಂದ ಬಿ ಫಾರಂ ವಿತರಣೆ: ಚಿತ್ರದುರ್ಗದಿಂದ ಕಣದಲ್ಲಿದ್ದಾರೆ 75ರ ಜಿ.ತಿಪ್ಪಾರೆಡ್ಡಿ