ಬೆಂಗಳೂರು: ಯುವಕನೊಬ್ಬನನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸಿ, ಮೂತ್ರ ನೆಕ್ಕಿಸಿದ ಆರೋಪಕ್ಕೆ ಸಿಲುಕಿರುವ ಚಿಕ್ಕಮಗಳೂರಿನ ಗೋಣಿಬೀಡು ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಅರ್ಜುನ್ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ಅಧಿಕಾರಿ ಅರ್ಜುನ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ ಅರ್ಜಿ ವಜಾಗೊಳಿಸಿದೆ. ಆರೋಪಿಯ ಕೃತ್ಯ ಅತ್ಯಂತ ಹೀನಾಯವಾಗಿದೆ. ದೂರುದಾರನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಕರಣ ಇನ್ನು ತನಿಖಾ ಹಂತದಲ್ಲಿರುವುದರಿಂದ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಮೇಲ್ಮನವಿ ವಜಾಗೊಳಿಸಿ ಆದೇಶಿಸಿದೆ.
ಅಧಿಕಾರಿ ವಿರುದ್ಧದ ಆರೋಪವೇನು :
ಮಹಿಳೆಯೊಬ್ಬರಿಗೆ ಕರೆ ಮಾಡಿ ಅನುಚಿತವಾಗಿ ವರ್ತಿಸಿದ ಆರೋಪ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಕಿರುಗುಂಡ ಗ್ರಾಮದ ಯುವಕ ಪುನೀತ್ನನ್ನು ಮೇ 10 ರಂದು ಗೋಣಿಬೀಡು ಪಿಎಸ್‌ಐ ಅರ್ಜುನ್ ಠಾಣೆಗೆ ಕರೆದೊಯ್ದು ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೇ, ಯುವಕನಿಗೆ ಬಟ್ಟೆ ಬಿಚ್ಚಿಸಿ ಹಗ್ಗದಿಂದ ಕೈಕಾಲುಗಳನ್ನು ಕಟ್ಟಿ, ಮನಬಂದಂತೆ ಹಲ್ಲೆ ನಡೆಸಿ ಮೂತ್ರ ನೆಕ್ಕಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಪುನೀತ್ ದೂರು ದಾಖಲಿಸಿದ ಬಳಿಕ ಪಿಎಸ್‌ಐ ಅರ್ಜುನ್ ಅವರನ್ನು ಅಮಾನತು ಮಾಡಿ, ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.
ಈ ಹಿನ್ನೆಲೆ ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಪಿಎಸ್‌ಐ ಅರ್ಜುನ್ ಸಲ್ಲಿಸಿದ್ದ ಅರ್ಜಿಯನ್ನು ಚಿಕ್ಕಮಗಳೂರಿನ ಮೊದಲನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಹೈಕೋರ್ಟ್‌ಗೆ ಅವರು ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: PSI ಮೂತ್ರ ಕುಡಿಸಿದ ಪ್ರಕರಣ ಸಂಬಂಧ ವಿಡಿಯೋ ಹರಿಬಿಟ್ಟ ಯುವಕ ಹೇಳಿದ್ದಿಷ್ಟು..