ಬೆಂಗಳೂರು: ಮಾದಕ ವಸ್ತುಗಳ ಮಾರಾಟವು ಯುವ ಪೀಳಿಗೆ ಹಾಗೂ ಇಡೀ ಸಮಾಜದ ವಿರುದ್ಧದ ಅಪರಾಧ ಕೃತ್ಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಕೇರಳ ಮೂಲದ 24 ವರ್ಷದ ವಿದ್ಯಾರ್ಥಿಗೆ ಜಾಮೀನು ನಿರಾಕರಿಸಿದೆ.
ಪ್ರಕರಣ ಸಂಬಂಧ ಜಾಮೀನು ಕೋರಿ ಕೇರಳದ ತಿರುವನಂತಪುರ ಮೂಲದ ಶ್ರೀಜಿತ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ಪೀಠ ಆದೇಶಿಸಿದೆ.
ವಿದ್ಯಾಭ್ಯಾಸಕ್ಕಾಗಿ ರಾಜ್ಯಕ್ಕೆ ಬಂಧಿರುವ ಅರ್ಜಿದಾರರು ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿಕೊಂಡಿದ್ದಾನೆ. ಪೊಲೀಸರಿಗೆ ಮಾದಕ ವಸ್ತುವಿನೊಂದಿಗೆ ಸಿಕ್ಕಿಬಿದ್ದಿದ್ದಾನೆ. ಡ್ರಗ್ಸ್ ಮಾರಾಟವು ಯುವ ಪೀಳಿಗೆ ಹಾಗೂ ಇಡೀ ಸಮಾಜದ ವಿರುದ್ಧದ ಅಪರಾಧ ಕೃತ್ಯವಾಗಿದೆ. ಇದಕ್ಕೆ ಯುವ ಪೀಳಿಗೆಯನ್ನು ಗುರಿಯಾಗಿಸಲಾಗುತ್ತಿದ್ದು, ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ನಗರದ ತಮ್ಮೇನಹಳ್ಳಿ ಸಬ್ ವೇ ಬಳಿ 2022ರ ಜೂನ್ 29ರಂದು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವೇಳೆ ಅರ್ಜಿದಾರ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಮಾದಕನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಎರಡನೇ ಆರೋಪಿಯಾದ ಅರ್ಜಿದಾರನಿಂದ 29 ಗ್ರಾಂ ಗಾಂಜಾ ಮತ್ತು 2 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗೆ ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದ.
ಅರ್ಜಿದಾರನ ಬಳಿ ದೊರೆತ ಮಾದಕ ವಸ್ತು ಪ್ರಮಾಣ ಕಡಿಮೆ ಎಂಬುದು ಸತ್ಯ. ಆದರೆ, ಪ್ರಕರಣದ ಮತ್ತೊಬ್ಬ ಆರೋಪಿಯ ಬಳಿ 50 ಗ್ರಾಂ ಎಂಡಿಎಂಎ ದೊರೆತಿದೆ. ಅದು ವಾಣಿಜ್ಯ ಪ್ರಮಾಣವಾಗಿದೆ. ಇನ್ನೂ ಅರ್ಜಿದಾರನ ಮೇಲಿನ ಆರೋಪಗಳಿಗೆ 20 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ. ಹಾಗಾಗಿ, ಜಾಮೀನು ನೀಡಲು ಇದು ಅರ್ಹ ಪ್ರಕರಣವಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.
ಇದನ್ನೂ ಓದಿ: ಅನಾರೋಗ್ಯದ ಬಗ್ಗೆ ತಿಳಿಸದೇ ವಿಮೆ ಮಾಡಿಸಿದಲ್ಲಿ ಮೆಡಿಕ್ಲೈಮ್ ನಿರಾಕರಿಸಬಹುದು: ಹೈಕೋರ್ಟ್