ಬೆಂಗಳೂರು: ಟಿವಿ ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆಂದು ಹೇಳಿ ಹಾಸನದಿಂದ ಅಪ್ರಾಪ್ತೆಯೊಬ್ಬಳನ್ನು ಕರೆತಂದು ಅತ್ಯಾಚಾರ ಎಸಗಿರುವ ಆರೋಪದಡಿ ಜೈಲು ಸೇರಿರುವ ವ್ಯಕ್ತಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಬೆಂಗಳೂರಿನ ಪ್ಯಾಲೇಟ್ ಗುಟ್ಟಳ್ಳಿ ನಿವಾಸಿ ಆನಂದ್ ಎಂಬಾತ ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಅಪ್ರಾಪ್ತೆಗೆ ನಂಬಿಸಿದ್ದ. ಬಳಿಕ ಮಾರ್ಚ್ 1ರಂದು ಅಪ್ರಾಪ್ತೆಯನ್ನು ಹಾಸನದಿಂದ ಬೆಂಗಳೂರಿಗೆ ಕರೆತಂದು ಲಾಡ್ಜ್ವೊಂದರಲ್ಲಿ ಇರಿಸಿದ್ದ. ನಂತರ ಆಕೆಯನ್ನು ಪ್ರೀತಿಸುತ್ತಿರುವುದಾಗಿ ಮತ್ತು ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದನಂತೆ.
ಮಗಳು ಕಾಣೆಯಾದ ಬಳಿಕ ಅಪ್ರಾಪ್ತೆಯ ತಾಯಿ 2020ರ ಮಾ. 6ರಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿ, ಪರಿಚಿತನಾಗಿದ್ದ ಆನಂದ್ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ದೂರಿನ ಮೇರೆಗೆ ಪೊಲೀಸರು ಮಾರ್ಚ್ 10ರಂದು ಸಂತ್ರಸ್ತೆಯನ್ನು ಪತ್ತೆ ಹಚ್ಚಿದ್ದರು. ಆ ಬಳಿಕ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದ ಅಪ್ರಾಪ್ತೆ, ಆನಂದ್ ಕೆಲ ದಿನಗಳಿಂದ ಪರಿಚವಾಗಿ ಆಗಾಗ ಫೋನ್ ಮಾಡುತ್ತಿದ್ದ. ಒಂದೆರಡು ಬಾರಿ ತಮ್ಮ ಮನೆಗೂ ಬಂದು ಪೋಷಕರ ವಿಶ್ವಾಸ ಗಳಿಸಿದ್ದ ಎಂದು ನಡೆದಿದ್ದ ಎಲ್ಲಾ ವೃತ್ತಾಂತವನ್ನು ವಿವರಿಸಿದ್ದಳು.
ಅಪ್ರಾಪ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಆರೋಪಿ ಆನಂದ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಮನವಿ ವಜಾಗೊಳಿಸಿದೆ. ಇದೊಂದು ಅಮಾಯಕ ಅಪ್ರಾಪ್ತೆಯನ್ನು ದಾರಿ ತಪ್ಪಿಸಿದ ಪ್ರಕರಣವಾಗಿದೆ. ಆರೋಪಿಗೆ ಜಾಮೀನು ನೀಡಲು ಯಾವುದೇ ಸಕಾರಣ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿ ತಿರಸ್ಕರಿಸಿದೆ.