ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಕೇಸ್ಗೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದ ಪೊಲೀಸರು ನಡೆಸಿರುವ ತನಿಖಾ ವರದಿಯನ್ನು ಸಂಬಂಧಿಸಿದ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ ತನಿಖಾಧಿಕಾರಿಗೆ ಅನುಮತಿ ನೀಡಿದೆ.
ಪ್ರಕರಣದ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ಕೋರಿ ಎಸ್‌ಐಟಿ ಸಲ್ಲಿಸಿದ್ದ ಮಧ್ಯಂತರ ಮನವಿ ಪರಿಗಣಿಸಿದ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ರಮೇಶ್ ಜಾರಕಿಹೊಳಿ ವಿರುದ್ಧ ಸಂತ್ರಸ್ತೆ ಯುವತಿ 2021ರ ಮಾರ್ಚ್ 26 ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಮೇರೆಗೆ ದಾಖಲಿಸಿರುವ ಪ್ರಕರಣದ ತನಿಖೆ ಈಗಾಗೇ ಮುಗಿದಿದೆ. ತನಿಖಾ ವರದಿಯನ್ನು ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅನುಮೋದಿಸಿದ್ದಾರೆ.
ಇದನ್ನೂ ಓದಿ: ಹೈಕೋರ್ಟ್ ವರ್ಚುವಲ್ ವಿಚಾರಣೆ ವೇಳೆ ಅರೆನಗ್ನವಾಗಿ ಕಾಣಿಸಿಕೊಂಡ ವ್ಯಕ್ತಿಯಿಂದ ಕ್ಷಮೆಯಾಚನೆ: ದೂರು ಇತ್ಯರ್ಥ
ಇನ್ನು ವರದಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ಕೋರಿ ಎಸ್‌ಟಿಸಿ ಮಧ್ಯಂತರ ಅರ್ಜಿ ಸಲ್ಲಿಸಿದೆ. ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸದಂತೆ ನಿರ್ಬಂಧಿಸಲು ನಮ್ಮ ಮುಂದೆ ಸೂಕ್ತ ಕಾರಣಗಳಿಲ್ಲ. ಆದ್ದರಿಂದ, ಎಸ್‌ಐಟಿ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬಹುದು ಎಂದು ಅನುಮತಿ ನೀಡಿದೆ.
ಅಲ್ಲದೇ, ಎಸ್‌ಐಟಿಯ ತನಿಖೆ ಅಧಿಕಾರ ವ್ಯಾಪ್ತಿ ಸೇರಿದಂತೆ ಸಂತ್ರಸ್ತೆ ಎತ್ತಬಹುದಾದ ಆಕ್ಷೇಪಣೆಗಳು ಮುಕ್ತವಾಗಿರಲಿದ್ದು ಅವುಗಳನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಬೇಕು. ಇನ್ನು, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ನಗರ ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ಹೈಕೋರ್ಟ್ ನಿರ್ಧರಿಸಲಿದೆ ಎಂದು ತಿಳಿಸಿ ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ವಾದ ಮಂಡಿಸಿ, ಪ್ರಕರಣದ ತನಿಖೆಗಾಗಿ ಎಸ್‌ಐಟಿಯನ್ನು ರಾಜ್ಯ ಸರ್ಕಾರ ಅಥವಾ ಹೈಕೋರ್ಟ್ ರಚಿಸಿರಲಿಲ್ಲ. ಸಂತ್ರಸ್ತೆಯ ದೂರು ದಾಖಲಿಸುವುದಕ್ಕೂ ಮುನ್ನ ಎಸ್‌ಐಟಿ ರಚಿಸಲಾಗಿದೆ. ಅದೂ ಆರೋಪಿ ಮನವಿ ಮೇರೆಗೆ ಗೃಹ ಸಚಿವರು ನೀಡಿದ ನಿರ್ದೇಶದಂತೆ ನಗರ ಪೊಲೀಸ್ ಆಯುಕ್ತರು ಎಸ್‌ಐಟಿ ರಚಿಸಿದ್ದಾರೆ. ಹೀಗಾಗಿ, ಪ್ರಕರಣದ ತನಿಖೆ ನಡೆಸುವ ಅಧಿಕಾರ ಎಸ್‌ಐಟಿಗೆ ಇಲ್ಲ. ತನಿಖೆಯೂ ಸಿಆರ್‌ಪಿಸಿ ನಿಯಮಗಳಿಗೆ ಅನುಗುಣವಾಗಿ ನಡೆದಿಲ್ಲ. ಈ ಎಲ್ಲ ಪರಿಸ್ಥಿತಿಗಳನ್ನು ಪರಿಗಣಿಸಿಯೇ ಹೈಕೋರ್ಟ್ ತನಿಖೆಯ ಮೇಲ್ವಿಚಾರಣೆ ನಡೆಸಿತ್ತು. ಎಸ್‌ಐಟಿ ರಚನೆಯ ಸಿಂಧ್ವುತ್ವವನ್ನೇ ಪ್ರಶ್ನಿಸಿರುವುದರಿಂದ ವಿಚಾರಣಾ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಅನುಮತಿ ನೀಡಬಾರದು ಎಂದು ಮನವಿ ಮಾಡಿದರು.