ಬೆಂಗಳೂರು : ತನ್ನ ಇಬ್ಬರು ಪತ್ನಿಯರು ಹಾಗೂ ಓರ್ವ ಪುತ್ರಿಯನ್ನು ಕೊಲೆಗೈದು ಕಳೆದ 30 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಲಬುರಗಿ ಜಿಲ್ಲೆಯ ಅಫ್ಜಲ್ಪುರದ ಅಪರಾಧಿ ಸಾಯಿಬಣ್ಣ ಎಂಬಾತನಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಮಾರ್ಪಡಿಸಿರುವ ಹೈಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಅಪರಾಧಿಗೆ 70 ವರ್ಷ ವಯಸ್ಸಾಗಿದೆ ಎಂಬ ಕಾರಣದಿಂದ ಕೋರ್ಟ್ ಶಿಕ್ಷೆಯನ್ನು ಮಾರ್ಪಡಿಸಿತು. ಈ ಆದೇಶದಿಂದ ಆರೋಪಿ ಗಲ್ಲು ಶಿಕ್ಷೆಯಿಂದ ಪಾರಾಗಿದ್ದು, ತನ್ನ ಜೀವ ಇರುವವರೆಗೂ ಜೈಲಿನಲ್ಲಿರಬೇಕಾಗಿದೆ.
ತನಗೆ ವಿಧಿಸಿದ್ದ ಜೈಲು ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಅಪರಾಧಿ ಸಾಯಿಬಣ್ಣ ಅಲಿಯಾಸ್ ನಿಂಗಪ್ಪ ನಾಟಿಕರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜಿ.ನರೇಂದರ್ ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಸಾಕ್ಷ್ಯಾಧಾರಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿದಲ್ಲಿ ಅರ್ಜಿದಾರರು ಈಗಾಗಲೇ 30 ವರ್ಷಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಹೀಗಾಗಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ನೀಡುವುದರೊಂದಿಗೆ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದರೆ ನ್ಯಾಯ ಸಂದಾಯವಾದಂತಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಅರ್ಜಿದಾರ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಸರ್ಕಾರದಲ್ಲಿ 2005ರ ಮೇ 31ರಿಂದ 2007ರ ಜ.9ರವರೆಗೆ ಎಂದರೆ, ಒಂದು ವರ್ಷ 9 ತಿಂಗಳು ಮತ್ತು 9 ದಿನ ವಿಳಂಬವಾಗಿದೆ. ಎರಡನೇಯದಾಗಿ ರಾಜ್ಯಪಾಲರ ಸಚಿವಾಲಯದಲ್ಲಿ 2007ರ ಜ.12ರಿಂದ 2007ರ ಫೆ.2ರವರೆಗೆ ವಿಳಂಬವಾಗಿದೆ. ಮೂರನೆಯದಾಗಿ ಕೇಂದ್ರ ಸರ್ಕಾರಕ್ಕೆ ಸಂವಹನ ಕಳುಹಿಸಿಕೊಡುವಲ್ಲಿ 24 ದಿನ ವಿಳಂಬವಾಗಿದೆ. ನಾಲ್ಕನೆಯದಾಗಿ ರಾಷ್ಟ್ರಪತಿ ಬಳಿ ಅರ್ಜಿ 2007ರ ಫೆ.28ರಿಂದ 2013ರ ಜ.3ರವರೆಗೆ ಇತ್ಯರ್ಥವಾಗದೆ ಉಳಿದಿದೆ. ನಾಲ್ಕು ಹಂತಗಳಲ್ಲಿ ಕ್ಷಮಾದಾನ ಅರ್ಜಿ ಪರಿಗಣಿಸುವುದು 7 ವರ್ಷ 8 ತಿಂಗಳು ವಿಳಂಬವಾಗಿದೆ. ಆದರೆ ಅದಕ್ಕೆ ಯಾವುದೇ ಕಾರಣ ನೀಡಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅಲ್ಲದೆ, ಅಪರಾಧಿಯನ್ನು 2003ರ ಜ.10ರಿಂದ 2019ರ ಮೇ 20ರವರೆಗೆ ಬೆಳಗಾವಿಯ ಒಂದೇ ಕೋಣೆಯಲ್ಲಿ ಏಕಾಂಗಿಯಾಗಿ ಇರಿಸಲಾಗಿದೆ. ಅದರಂತೆ ಆತ 16 ವರ್ಷ ಏಕಾಂಗಿ ಸೆರೆವಾಸ ಅನುಭವಿಸಿದಂತಾಗಿದೆ. ಕಾರಾಗೃಹ ಅಧಿಕಾರಿಗಳು ಸಲ್ಲಿಸಿರುವ ಆರೋಗ್ಯ ವರದಿ ಪ್ರಕಾರ ಅರ್ಜಿದಾರನಿಗೆ ಎದೆಯ ಎರಡೂ ಭಾಗಗಳಲ್ಲಿ ನೋವು ಇದೆ. ಭಯದಿಂದ ತತ್ತರಿಸಿದ್ದಾನೆ ಮತ್ತು ಬೇಧಿಯಿಂದ ಬಳಲುತ್ತಿದ್ದು, ಆರೋಗ್ಯ ತೀವ್ರ ಹದಗೆಟ್ಟಿದೆ. ಆದ ಕಾರಣ ಶಿಕ್ಷೆ ಬದಲಾವಣೆ ಮಾಡಲಾಗುತ್ತಿದೆ ಎಂದು ಪೀಠ ಹೇಳಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರನ ಕ್ಷಮಾದಾನ ಅರ್ಜಿ ಇತ್ಯರ್ಥವಾಗುವುದು 7 ವರ್ಷ 8 ತಿಂಗಳು, 9 ದಿನ ವಿಳಂಬವಾಗಿದೆ ಮತ್ತು ಕಾನೂನಿನಲ್ಲಿ ಸಮ್ಮತಿ ಇಲ್ಲದಿದ್ದರೂ ಏಕಾಂಗಿಯಾಗಿ ಸೆರೆವಾಸ ಅನುಭವಿಸುವ ಶಿಕ್ಷೆ ವಿಧಿಸಲಾಗಿದೆ. ಹಾಗಾಗಿ ಅವರಿಗೆ ನೀಡಿರುವ ಗಲ್ಲು ಶಿಕ್ಷೆ ರದ್ದುಗೊಳಿಸಬೇಕು ಎಂದು ಕೋರಿದ್ದರು. ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿದ್ದ ಹಿರಿಯ ವಕೀಲ ವಿಕ್ರಂ ಹುಯಿಲಗೋಳ, ಆತ ಗಲ್ಲು ಶಿಕ್ಷೆಯನ್ನು ಕಡಿತಗೊಳಿಸುವಂತೆ ಕೋರಲು ಹಕ್ಕಿದೆ. ಕ್ಷಮಾದಾನ ಅರ್ಜಿ ಪರಿಗಣಿಸುವುದು ಮತ್ತು ವಿಲೇವಾರಿಯಲ್ಲಿ ವಿಳಂಬವಾಗಿರುವುದನ್ನು ಗಾಯವೆಂದು ಪರಿಗಣಿಸಬಹುದಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ: ಪತ್ನಿಯ ಮೇಲೆ ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸಿ ಸಾಯಿಬಣ್ಣ 1988ರ ಜನವರಿ 9ರಂದು ಮಾಲಕವ್ವಳನ್ನು ಕೊಲೆ ಮಾಡಿ ತಾನೇ ಬಂದು ಪೊಲೀಸರಿಗೆ ಶರಣಾಗಿದ್ದನು. ಆ ನಂತರ ಜೈಲಿನಲ್ಲಿರುವಾಗ ಸಹಖೈದಿ ದತ್ತು ಎಂಬಾತನೊಂದಿಗೆ ಆತನ ಸ್ನೇಹ ಬೆಳೆಯಿತು. ಜಾಮೀನು ಪಡೆದು ಸಹಖೈದಿ ದತ್ತು ಅವರ ಪುತ್ರಿ ನಾಗಮ್ಮಗಳನ್ನು ವಿವಾಹವಾಗಿದ್ದನು. 2ನೇ ಪತ್ನಿ ನಾಗಮ್ಮಳಿಗೆ ವಿಜಯಲಕ್ಷ್ಮಿ ಎಂಬ ಮಗು ಜನಿಸಿತ್ತು.
ಈ ನಡುವೆ ಮೊದಲ ಪತ್ನಿ ಕೊಲೆ ಕೇಸಿನಲ್ಲಿ ಸಾಯಿಬಣ್ಣನಿಗೆ ಜೀವಾವಧಿ ಶಿಕ್ಷೆ ಆಗಿತ್ತು. 1994ರಲ್ಲಿ ಪೆರೋಲ್ ಪಡೆದು ಹೊರಬಂದಿದ್ದ ಸಾಯಿಬಣ್ಣ 2ನೇ ಪತ್ನಿ ಹಾಗೂ ಮಗುವನ್ನು ಕೊಲೆ ಮಾಡಿ ಮತ್ತೆ ಜೈಲು ಸೇರಿದ್ದ.
ಅಪರಾಧಿಗೆ ಕಲಬುರಗಿ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ನಂತರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಕೂಡ ಆ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಆದರೆ ಆತ ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ 7 ವರ್ಷ 8 ತಿಂಗಳು ವಿಳಂಬ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆಯಿಂದ ವಿನಾಯ್ತಿ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು.
ಇದನ್ನೂ ಓದಿ : ಹಿಜಾಬ್ ಗೋಡೆಬರಹ: ಆರೋಪಿಗಳ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು