ಬೆಂಗಳೂರು : ಅತ್ಯಾಚಾರ ಪ್ರಕರಣದ ಆರೋಪಿಯು ಸಂತ್ರಸ್ತೆಯನ್ನೇ ವಿವಾಹ ಆಗಿರುವುದನ್ನು ಪರಿಗಣಿಸಿದ ಹೈಕೋರ್ಟ್, ಆರೋಪಿ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಿದೆ. ಅತ್ಯಾಚಾರ ಎಸಗಿದ್ದ ಸಂತ್ರಸ್ತೆಯನ್ನು ವಿವಾಹವಾದ ಬಳಿಕವೂ ತನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಪೊಲೀಸರ ಕ್ರಮ ಆಕ್ಷೇಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣ ರದ್ಧತಿಗೆ ಕೋರಿದ್ದ. ವಿಚಾರಣೆಗೆ ಸಂತ್ರಸ್ತೆ ಹಾಜರಾಗಿ ದೂರು ಹಿಂಪಡೆಯುವುದಾಗಿ ತಿಳಿಸಿದರೆ, ಸಂತ್ರಸ್ತೆಯನ್ನು ವಿವಾಹವಾಗುತ್ತೇನೆ. ಜೀವನಪೂರ್ತಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆಯನ್ನು ನೀಡಿದ್ದ. ಜೊತೆಗೆ, ಈ ಸಂಬಂಧ ಆರೋಪಿಯು ಪ್ರಮಾಣಪತ್ರ ಸಲ್ಲಿಸಿದ್ದ.
ಇದೆಲ್ಲವನ್ನು ಪರಿಗಣಿಸಿದ ಹೈಕೋರ್ಟ್, ಆರೋಪಿ ವಿರುದ್ಧದ ಅತ್ಯಾಚಾರ, ಹಣ ವಸೂಲಿ ಮತ್ತು ಜೀವ ಬೆದರಿಕೆ ಪ್ರಕರಣವನ್ನು ರದ್ದುಪಡಿಸಿದೆ. ಹಾಗೆಯೇ, ಸಂತ್ರಸ್ತೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಯಾವುದೇ ರೀತಿ ತೊಂದರೆ ನೀಡಬಾರದು ಎಂದು ಆರೋಪಿಗೆ ಸೂಚಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿದೆ. ನಗರದ ಯುವತಿಯೊಬ್ಬರು 2022ರ ಅಕ್ಟೋಬರ್‌ನಲ್ಲಿ ಪೊಲೀಸರಿಗೆ ದೂರು ನೀಡಿ, ತನ್ನ ಸ್ನೇಹಿತ ಹುಟ್ಟುಹಬ್ಬದ ಆಚರಣೆ ನಿಮಿತ್ತ ಮನೆಗೆ ಆಹ್ವಾನಿಸಿದ್ದ. ಆಗ ಕುಡಿದು ಬಂದಿದ್ದ ಆರೋಪಿ, ಅತ್ಯಾಚಾರ ನಡೆಸಿದ್ದ ಎಂದು ಆರೋಪಿಸಿದ್ದರು. ಪೊಲೀಸರು ಆರೋಪಿ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ ಮತ್ತು ಹಣ ವಸೂಲಿ ಸೇರಿದಂತೆ ಇನ್ನಿತರ ಆರೋಪಗಳಡಿ ಎಫ್‌ಐಆರ್ ದಾಖಲಿಸಿದ್ದರು. ಅದನ್ನು ರದ್ದುಪಡಿಸಲು ಕೋರಿ ಅತ್ಯಾಚಾರ ಆರೋಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರನ ಪರ ವಕೀಲ ಸಿ.ಎನ್. ರಾಜು ವಾದ ಮಂಡಿಸಿ, ಸಂತ್ರಸ್ತೆ ಮತ್ತು ಅರ್ಜಿದಾರರು ಪರಸ್ಪರ ಪ್ರೀತಿಸುತ್ತಿದ್ದರು. ಭಿನ್ನಾಭಿಪ್ರಾಯದಿಂದ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಆಕೆಗೆ 32 ವರ್ಷವಾಗಿದ್ದು, ದೂರು ದಾಖಲಿಸಿದ ನಂತರ ಪೊಲೀಸರ ಮುಂದೆ ಹಾಜರಾಗಿ ದೂರು ಹಿಂಪಡೆಯಲಾಗುವುದು ಎಂದು ತಿಳಿಸಿದ್ದರು. ಅದಕ್ಕೆ ಪೊಲೀಸರು ಒಪ್ಪಿರಲಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಆ ನಂತರ ಸಂತ್ರಸ್ತೆ ಮತ್ತು ಆರೋಪಿ ಮದುವೆಯಾಗಿದ್ದು, ಪೊಲೀಸ್ ಠಾಣೆಗೆ ತೆರಳಿ ದೂರು ಹಿಂಪಡೆಯುವಾಗಿ ತಿಳಿಸಿದ್ದರು. ಹೀಗಿದ್ದರೂ ಪೊಲೀಸರು ಮಾತ್ರ ದೂರುದಾರಳ ಹೇಳಿಕೆ ದಾಖಲಿಸದೆ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಸದ್ಯ ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮದುವೆಯಾಗಿ ನೆಮ್ಮದಿಯಿಂದ ಸಂಸಾರ ನಡೆಸುತ್ತಿದ್ದಾರೆ. ಪ್ರಕರಣ ಹಿಂಪಡೆಯಲು ಇಬ್ಬರೂ ಜಂಟಿ ಪ್ರಮಾಣ ಪತ್ರ ಸಲ್ಲಿಸಿದ್ದು, ಅದನ್ನು ಪುರಸ್ಕರಿಸಿ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿ ನ್ಯಾಯಪೀಠವು ಪ್ರಕರಣ ಮುಕ್ತಾಯಗೊಳಿಸಿದೆ.
ಇದನ್ನೂ ಓದಿ: ಜೋಶಿಮಠ ಭೂಕುಸಿತ ಪ್ರಕರಣ: ಮಧ್ಯ ಪ್ರವೇಶ ಮಾಡಲು ಸುಪ್ರೀಂ ಕೋರ್ಟ್ ನಿರಾಕರಣೆ
ಬಿಡಿಎ ಪತ್ರ ರದ್ದುಗೊಳಿಸಿದ ಹೈಕೋರ್ಟ್: ಬೆಂಗಳೂರಿನ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಗೆ ನೀಡಿದ್ದ ಜಾಗದ ನವೀಕರಣದ ವೇಳೆ ನೀಡಲಾಗಿದ್ದ 50 ಲಕ್ಷ ರೂ. ಮೊತ್ತದ ವಿನಾಯ್ತಿ ಮರುಪಾವತಿ ಮಾಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಳುಹಿಸಿದ್ದ ಪತ್ರವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಬೆಂಗಳೂರಿನ ಬನಶಂಕರಿ ಎರಡನೇ ಹಂತದಲ್ಲಿರುವ ಅಕಾಡೆಮಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ 2014ರ ನವೆಂಬರ್ನಲ್ಲಿ ಬಿಡಿಎ ನೀಡಿದ್ದ ಪತ್ರವನ್ನು ರದ್ದುಪಡಿಸಿ ಆದೇಶಿಸಿದೆ. ಇದರಿಂದಾಗಿ ಅಕಾಡೆಮಿಗೆ ಮೊತ್ತ ಪಾವತಿಯಿಂದ ವಿನಾಯ್ತಿ ದೊರೆದಿದೆ.
ಬಿಡಿಎ ದೇಣಿಗೆ(ಡೊನೇಷನ್) ಎಂಬ ಪದವನ್ನು ತಪ್ಪಾಗಿ ಅರ್ಥೈಸಿಕೊಂಡಿದೆ. ಬಿಡಿಎ ಅರ್ಜಿದಾರರಿಗೆ ಯಾವುದೇ ಡೊನೇಷನ್ ನೀಡಿಲ್ಲ. ಆದರೆ ಅದು ಅಕಾಡೆಮಿಗೆ ನೀಡಿದ್ದ ಜಾಗದ ಗುತ್ತಿಗೆಯನ್ನು ನವೀಕರಣ ಮಾಡಿಕೊಡುವ ಸಂದರ್ಭದಲ್ಲಿ ವಿನಾಯ್ತಿಯನ್ನು ನೀಡಿದೆ. ಆದರೆ ಅದನ್ನೇ ಬಿಡಿಎ, ದೇಣಿಗೆ ಎಂದು ಹೇಳಿದೆ. ಜೊತೆಗೆ ಆಡಿಟರ್ ಕೂಡ ಅದನ್ನು ಪರಿಶೀಲಿಸದೆ ಪ್ರಾಧಿಕಾರ ಅಕಾಡೆಮಿಗೆ ಡೊನೇಷನ್ ನೀಡಲಾಗಿದೆ ಎಂದು ಭಾವಿಸಿ ಹಣ ಮರುಪಾವತಿಗೆ ಸೂಚನೆ ನೀಡಿತ್ತು. ಅದನ್ನು ಆಧರಿಸಿ ಬಿಡಿಎ, ಸಂವಹನ ಕಳುಹಿಸಿದ್ದೆ ಇಷ್ಟಕ್ಕೆಲ್ಲಾ ಕಾರಣ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
ಬಿಡಿಎ ಆಡಿಟರ್‌ಗೆ ಸೂಕ್ತ ವಿವರಣೆಯನ್ನು ನೀಡಬೇಕಿತ್ತು. ಅಕಾಡೆಮಿಗೆ ಯಾವುದೇ ದೇಣಿಗೆ ನೀಡಿಲ್ಲ, ಆದರೆ ವಹಿವಾಟಿನ ವೇಳೆ ಡೋನೇಷನ್ ಎಂಬ ಪದ ತಪ್ಪಾಗಿ ಅರ್ಥೈಸಲಾಗಿದೆ. ಹೀಗಾಗಿ ವಿನಾಯ್ತಿ ನೀಡಲಾದ ಮೊತ್ತ ಮರುಪಾವತಿಗೆ ತಾಕೀತು ಮಾಡಿರುವುದು ಸಮಂಜಸವಲ್ಲ. ಜೊತೆಗೆ ಲೆಕ್ಕ ಪರಿಶೋಧಕರು ಅಕಾಡೆಮಿಯಿಂದ ಸ್ಪಷ್ಟನೆ ಪಡೆಯಬಹುದಿತ್ತು ಎಂದು ಕೋರ್ಟ್ ಹೇಳಿದೆ. ವಿಚಾರಣೆ ವೇಳೆ ಬಿಡಿಎ ಪರ ವಕೀಲರು, ಪ್ರಾಧಿಕಾರ ಸಕ್ಷಮ ಪ್ರಾಧಿಕಾರವಾಗಿದ್ದು, ಅದು ಸಾರ್ವಜನಿಕ ಸ್ವತ್ತಿನ ಟ್ರಸ್ಟಿಯಾಗಿದೆ. ಯಾವುದೇ ರೀತಿಯ ವಿನಾಯ್ತಿ ನೀಡಲು ಸಾಧ್ಯವಿಲ್ಲ ಎಂಬುದಾಗಿ ಒಪ್ಪಿಕೊಂಡಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.