ಬೆಂಗಳೂರು: ಸಾವಿಗೂ ಮುನ್ನ ಎರಡು ತಿಂಗಳಿನಿಂದ ಸತತವಾಗಿ ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾಗಿದ್ದರೂ, ಕಾರ್ಯದೊತ್ತಡ ಮತ್ತು ಆಯಾಸದಿಂದ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಬಿಎಂಟಿಸಿ) ಚಾಲಕ ಮೃತಪಟ್ಟಿದ್ದಾರೆ ಎಂದು ತಿಳಿಸಿ ಅವರ ತಾಯಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ನೀಡಿದೆ.
ಈ ಸಂಬಂಧ ವಿಚಾರಣಾ ನ್ಯಾಯಾಲಯದ ಮುಂದೆ ಬಿಎಂಟಿಸಿ ಇಟ್ಟಿದ್ದ ಠೇವಣಿಯನ್ನು ಹಿಂದಿರುಗಿಸಲು ಸೂಚನೆ ನೀಡಿದೆ. ಪರಿಹಾರ ನೀಡುವಂತೆ ಘೋಷಣೆ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬಿಎಂಟಿಸಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯ ಗೌಡ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿತು.
ಮೃತನ ತಾಯಿ, ತನ್ನ ಪುತ್ರ ಉದ್ಯೋಗ ನಿರ್ವಹಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬುದಾಗಿ ಕ್ಲೇಮು ಅರ್ಜಿಯಲ್ಲಿ ತಿಳಿಸಿಲ್ಲ. ಚಾಲಕ ಮೃತಪಡುವ ಮುನ್ನ ಎರಡು ತಿಂಗಳಿಂದಲೂ ಉದ್ಯೋಗಕ್ಕೆ ಅನಧಿಕೃತವಾಗಿ ಗೈರಾಗಿದ್ದಾರೆ. ಸಾಕ್ಷ್ಯಾಧಾರ ಲಭ್ಯವಿದೆ. ಹಾಗಾಗಿ, ಉದ್ಯೋಗ ನಿರ್ವಹಣೆ ವೇಳೆ ಆತ ಸಾವನ್ನಪ್ಪಿದ್ದಾರೆ ಎಂಬುದಾಗಿ ಪರಿಗಣಿಸಲಾಗದು. ಆದ್ದರಿಂದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.
ಬೋಜರಾಜ 2008 ರಲ್ಲಿ ಸಾವನ್ನಪ್ಪಿದ್ದಾರೆ. ತಾಯಿ ಪರಿಹಾರ ಕೋರಿ 2016 ರಲ್ಲಿ ಅಂದರೆ 8 ವರ್ಷ ಕಾಲ ವಿಳಂಬವಾಗಿ ಕ್ಲೇಮು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರೆಯು 2010 ರಲ್ಲಿ ಅಂದಿನ ಸಾರಿಗೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಅದರಲ್ಲೂ ಸಹ ಪುತ್ರ ಉದ್ಯೋಗ ನಿರ್ವಹಣೆ ವೇಳೆ ಸಾವನ್ನಪ್ಪಿದ್ದಾರೆ ಎಂಬುದಾಗಿ ಹೇಳಿರಲಿಲ್ಲ. ಕ್ಲೇಮು ಅರ್ಜಿಯಲ್ಲೂ ಈ ವಿಚಾರವನ್ನು ತಿಳಿಸಿರಲಿಲ್ಲ ಎಂದು ಅಭಿಪ್ರಾಯಪಟ್ಟಿತು.
ಸಾವನ್ನಪ್ಪಿದ ದಿನದಂದು ಬೋಜರಾಜ ಉದ್ಯೋಗ ನಿರ್ವಹಿಸುತ್ತಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಹೀಗಿರುವಾಗ ಉದ್ಯೋಗ ನಿರ್ವಹಣೆಯಲ್ಲಿ ಕಾರ್ಯದೊತ್ತಡ ಮತ್ತು ಆಯಾಸ ಉಂಟಾಗಿ ಬೋಜರಾಜ ಸಾವನ್ನಪ್ಪಿರುವುದಾಗಿ ವಿಚಾರಣಾ ನ್ಯಾಯಾಲಯವು ತಪ್ಪಾಗಿ ಭಾವಿಸಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ ಹೀಗಿದೆ..: ಕೆ.ಟಿ. ಬೋಜರಾಜ ಎಂಬವರು ಬಿಎಂಟಿಸಿಯಲ್ಲಿ ಚಾಲಕ ಮತ್ತು ನಿರ್ವಾಹಕ ನೌಕರಿಗೆ ನೇಮಕಗೊಂಡಿದ್ದರು. ಪ್ರೊಬೆಷನರಿ ಅವಧಿ ಪೂರೈಸಿದ್ದರು. 2008 ರಲ್ಲಿ ಮೃತಪಟ್ಟಿದ್ದರು. 2016 ರಲ್ಲಿ ಮೃತರ ತಾಯಿ ವಿಚಾರಣಾ ನ್ಯಾಯಾಲಯಕ್ಕೆ ಪರಿಹಾರ ಕೋರಿ ಕ್ಲೇಮು ಅರ್ಜಿ ಸಲ್ಲಿಸಿದ್ದರು.
ಪುತ್ರನಿಗೆ ಕೇವಲ 21 ವರ್ಷವಾಗಿತ್ತು. ಆತ ಯುವಕ ಹಾಗೂ ಸದೃಢವಾಗಿದ್ದ. ಪೀಣ್ಯ ಡಿಪೋವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಆತನ ಸೇವೆ ಹಿರಿಯ ಅಧಿಕಾರಿಗಳಿಗೆ ತೃಪ್ತಿ ತಂದಿತ್ತು. ಆದರೆ, ಬೆಂಗಳೂರು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರಿಂದ ಒತ್ತಡ ಮತ್ತು ಆಯಾಸ ಉಂಟಾಗಿ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ.
ಉತ್ತಮ ಚಿಕಿತ್ಸೆ ಕಲ್ಪಿಸಿದ ಹೊರತಾಗಿಯೂ 2008 ರ ಸೆ.2 ರಂದು ಸಾವನ್ನಪ್ಪಿದ್ದಾನೆ. ಆದ್ದರಿಂದ ಪರಿಹಾರ ನೀಡಬೇಕು ಎಂದು ಕ್ಲೇಮು ಅರ್ಜಿಯಲ್ಲಿ ಕೋರಿದ್ದರು. ಅರ್ಜಿ ಪುರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯವು, ಅರ್ಜಿದಾರೆಗೆ ಒಟ್ಟು 10,10,660ರೂ. ಪಾವತಿಸುವಂತೆ ಬಿಎಂಟಿಸಿಗೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಬಿಎಂಟಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಇದನ್ನೂ ಓದಿ: ಒಳ ಮೀಸಲಾತಿ ಶಿಫಾರಸು ಆದೇಶ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್