ಬೆಂಗಳೂರು: ಪೋಸ್ಟ್ ಮಾಸ್ಟರ್ಗಳ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ದೂರು ಮತ್ತು ವಿಚಾರಣೆಯನ್ನು ರದ್ದುಪಡಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಉದ್ಯೋಗದಿಂದ ವಜಾಗೊಳಿಸಿರುವುದು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಕ್ಕೆ ಆಧಾರವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಮಹಿಳೆಯೊಬ್ಬರು ತಮ್ಮ ವಿರುದ್ಧ ದಾಖಲಿಸಿದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಬಸವನಗುಡಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್‌ಗಳಾದ ರಾಧಾಕೃಷ್ಣ ಮತ್ತು ಹನುಮಂತಯ್ಯ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ಕೆ.ನಟರಾಜನ್ ಅವರ ಪೀಠ ಈ ಆದೇಶ ನೀಡಿದೆ.
ಪ್ರಕರಣದ ಹಿನ್ನಲೆ ಏನು? : ಮಹಿಳೆಯು 2018ರ ಮೇ 16ರಂದು ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿ, ತನ್ನ ತಾಯಿ ಬಸವನಗುಡಿ ಅಂಚೆ ಕಚೇರಿಯಲ್ಲಿ ಗುತ್ತಿಗೆ ಉದ್ಯೋಗಿಯಾಗಿದ್ದರು. ಅವರು ಅನಾರೋಗ್ಯಕ್ಕೆ ಗುರಿಯಾದಾಗ ನಾನು ಅಂಚೆ ಕಚೇರಿಗೆ ಹೋಗಿ ಕೆಲಸ ಮಾಡುತ್ತಿದ್ದೆ. ರಾಧಾಕೃಷ್ಣ ಅವರು ಕಳೆದ ಹತ್ತು ವರ್ಷಗಳಿಂದ ಪೋಸ್ಟ್ ಮಾಸ್ಟರ್ ಆಗಿದ್ದರು. ತರುವಾಯ ಹನುಮಂತಯ್ಯ ಪೋಸ್ಟ್ ಮಾಸ್ಟರ್ ಆದರು. ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದೇಳಿ ನನಗೆ ಹನುಮಂತಯ್ಯ ಅವಮಾನಿಸುತ್ತಿದ್ದರು. ಸರಿಯಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಕೆಲಸದಿಂದ ತೆಗೆದು ಹಾಕುತ್ತೇನೆ ಎಂದು ನನಗೆ ಬೆದರಿಕೆ ಹಾಕುತ್ತಿದ್ದರು ಎಂದು ದೂರಿದ್ದರು.
ಇದನ್ನೂ ಓದಿ: ಚಾಲನಾ ಪರವಾನಿಗೆ ನಕಲಿ ಎಂದು ಸಾಬೀತುಪಡಿಸುವುದು ವಿಮಾ ಕಂಪೆನಿ ಜವಾಬ್ದಾರಿ: ಹೈಕೋರ್ಟ್
ನಾನು ಕ್ಷಮೆ ಕೇಳಿದ ಹೊರತಾಗಿಯೂ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕುವುದನ್ನು ಮುಂದುವರಿಸುತ್ತಿದ್ದರು. ಇದರಿಂದ ಬೇಸರಗೊಂಡು ಟೆರಸ್‌ಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದೆ. ಕಚೇರಿ ಸಿಬ್ಬಂದಿ ವಾಪಸ್ ಕರೆತಂದಿದ್ದರು. ನಂತರ ಹನುಮಂತಯ್ಯ ನನ್ನ ಬಳಿ ಲೈಂಗಿಕತೆಯ ಆಸೆ ವ್ಯಕ್ತಪಡಿಸಿದ್ದು, ಅದನ್ನು ತಿರಸ್ಕರಿಸಿದೆ. ಒಂದು ದಿನ ರಾಮಕೃಷ್ಣ ಅವರು ನನ್ನನ್ನು ಕಾರಿನಲ್ಲಿ 8ನೇ ಮೈಲಿಯ ಬಳಿಯ ಉದ್ಯಾನಕ್ಕೆ ಕರೆದೊಯ್ದು, ಲೈಂಗಿಕ ಕಿರುಕುಳ ನಡೆಸಲು ಯತ್ನಿಸಿದರು. ಆ ಸಂದರ್ಭದಲ್ಲಿ ಯಾರೋ ಬಂದು ರಾಧಾಕೃಷ್ಣ ಅವರನ್ನು ಹಿಡಿದರು. ಅಲ್ಲಿಂದ ನಾನು ಹೊರಟು ಬಂದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು, ರಾಧಾಕೃಷ್ಣ ಮತ್ತು ಹನುಮಂತಯ್ಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವು 37ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು. ಹಾಗಾಗಿ, ಅವರು ದೂರಿನ ರದ್ದತಿಗೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಲಂಚಕ್ಕೆ ಬೇಡಿಕೆಯಿಟ್ಟು, ಸ್ವೀಕರಿಸದಿದ್ದರೆ ಅದು ಭ್ರಷ್ಟಾಚಾರವಲ್ಲ: ಹೈಕೋರ್ಟ್
ನ್ಯಾಯಾಲಯದ ಆದೇಶದಲ್ಲೇನಿದೆ?: ದೂರು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆ ಪರಿಗಣಿಸಿದ ನ್ಯಾಯಪೀಠ, ರಾಧಾಕೃಷ್ಣ ಅವರು ಕಾರಿನಲ್ಲಿ ದೂರುದಾರೆಯನ್ನು 8ನೇ ಮೈಲಿಯ ಪಾರ್ಕ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದರು. ಕೆಲ ವ್ಯಕ್ತಿಗಳು ಆತನನ್ನು ಹಿಡಿದಿದರು ಎಂಬುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಆದರೆ, ಪೊಲೀಸರು 8ನೇ ಮೈಲಿಯ ಪಾರ್ಕ್‌ಗೆ ತೆರಳಿ, ಆ ಪಾರ್ಕ್ ಅಲ್ಲಿದೆಯೇ ಅಥವಾ ಇಲ್ಲವೇ? ಅಲ್ಲಿ ಸಿಸಿಟಿವಿ ಅಳವಡಿಸಲಾಗಿದೆಯೇ? ಅದರ ದೃಶ್ಯಗಳನ್ನು ಪಡೆದು ವಾಸ್ತವವಾಗಿ ರಾಧಾಕೃಷ್ಣ ಮತ್ತು ದೂರುದಾರೆಯು ಪಾರ್ಕ್‌ಗೆ ಭೇಟಿ ನೀಡಿದ್ದರೇ? ಅಥವಾ ಇಲ್ಲವೇ? ಎಂಬ ಬಗ್ಗೆ ತನಿಖೆ ನಡೆಸಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೇ, ಅರ್ಜಿದಾರರ ಮೇಲಿನ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಪೂರಕ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ಒದಗಿಸಿಲ್ಲ ಎಂದು ಅಭಿಪ್ರಾಯ ಪಟ್ಟು ಪ್ರಕರಣ ರದ್ದು ಪಡಿಸಿರುವುದಾಗಿ ಪೀಠ ತಿಳಿಸಿದೆ.