ಬೆಂಗಳೂರು: ಏಳು ವರ್ಷಗಳ ಹಿಂದೆ ಸಣ್ಣ ಅಪಘಾತ ಮಾಡಿದ್ದಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ವಿಧಿಸಿದ್ದ ಎರಡು ತಿಂಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಶಿವಮೊಗ್ಗ ನಿವಾಸಿ, ಕೆಎಸ್ಆರ್‌ಟಿಸಿ ಚಾಲಕ ಎಚ್.ದೇವೇಂದ್ರಪ್ಪ ಸಲ್ಲಿಸಿದ್ದ ಕ್ರಿಮಿನಲ್ ರಿವಿಷನ್ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಶಿಕ್ಷೆ ರದ್ದುಗೊಳಿಸಿ ಆದೇಶಿಸಿದೆ.
ಚಾಲಕನಿಗೆ ಶಿಕ್ಷೆಯಾಗಿದ್ದ ವಿಚಾರವನ್ನೇ ಮುಂದಿಟ್ಟುಕೊಂಡು ಯಾವುದೇ ರೀತಿಯಲ್ಲೂ ಆತನ ವೃತ್ತಿಗೆ ತೊಂದರೆ ಮಾಡಬಾರದು. ಆತನ ಸೇವಾ ಪುಸ್ತಕದಲ್ಲಿ ಈ ಅಂಶ ಉಲ್ಲೇಖಿಸಬಾರದು ಎಂದು ಸಾರಿಗೆ ಸಂಸ್ಥೆಗೆ ಹೈಕೋರ್ಟ್ ನಿರ್ದೇಶಿಸಿದೆ.
ಓದಿ: ಪೆಗಾಸಸ್ ಸ್ಪೈವೇರ್ ಕುರಿತ ತುರ್ತು ಚರ್ಚೆಗೆ ಸಭಾಪತಿಗೆ ನೋಟಿಸ್ ನೀಡಿದ ರಾಜ್ಯಸಭೆ ಸದಸ್ಯ ಬಿನೋಯ್ ವಿಶ್ವಂ
ಇದೊಂದು ಸಣ್ಣ ಅಪಘಾತ. ಚಾರ್ಮಾಡಿ ಘಾಟ್ ರಸ್ತೆಯ ಕಡಿದಾದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅನ್ನು ಚಾಲಕ ಸರಿಯಾಗಿ ಚಾಲನೆ ಮಾಡುತ್ತಿದ್ದರೂ ಖಾಸಗಿ ಬಸ್‌ಗೆ ಡಿಕ್ಕಿಯಾಗಿದೆ. ಇದರಲ್ಲಿ ಚಾಲಕನ ನಿರ್ಲಕ್ಷ್ಯ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟಿರುವ ಪೀಠ, ಚಾಲಕನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಎರಡು ತಿಂಗಳ ಜೈಲು ಶಿಕ್ಷೆ ರದ್ದು ಮಾಡಿದೆ. ಕೇವಲ 1,500 ರೂ. ದಂಡ ಪಾವತಿಸಲು ಸೂಚಿಸಿದೆ.
2014ರ ಆಗಸ್ಟ್ ತಿಂಗಳಲ್ಲಿ ದೇವೇಂದ್ರಪ್ಪ ಅವರು ಚಾರ್ಮಾಡಿ ಘಾಟ್‌ನ ಕಿರಿದಾದ ರಸ್ತೆಯಲ್ಲಿ ಬಸ್ ಚಾಲನೆ ಮಾಡುತ್ತಿದ್ದರು. ಆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದು ಸಣ್ಣ ಅಪಘಾತ ಸಂಭವಿಸಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮ್ಯಾಜಿಸ್ಟ್ರೇಟ್ ಕೋರ್ಟ್ 2019ರಲ್ಲಿ ಪ್ರಕರಣದ ವಿಚಾರಣೆ ನಡೆಸಿ ಎರಡು ತಿಂಗಳು ಜೈಲು ಶಿಕ್ಷೆ ಮತ್ತು 1500 ರೂ. ದಂಡ ವಿಧಿಸಿತ್ತು. 2021ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಕೂಡ ಎತ್ತಿ ಹಿಡಿದಿತ್ತು. ಆ ಆದೇಶವನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ