ಬೆಂಗಳೂರು : ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಹೊರಡಿಸಿರುವ ಸುತ್ತೋಲೆಯ ಪ್ರಕಾರ ರಾಜ್ಯ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ವಕೀಲರಿಗೆ ಸರಳವಾದ ಡ್ರೆಸ್ ಕೋಡ್ ನಿಗದಿಪಡಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ಸೂಚನೆ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ. ಅದರಂತೆ, ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವ ವಕೀಲರು ಬಿಳಿ ಬಣ್ಣದ ಶರ್ಟ್ ಹಾಗೂ ನೆಕ್ ಬ್ಯಾಂಡ್ ಮತ್ತು ವಕೀಲೆಯರು ಬಿಳಿ ಬಣ್ಣದ ಸಲ್ವಾರ್ ಕಮೀಜ್ ಅಥವಾ ಬಿಳಿ ಬಣ್ಣದ ಸೀರೆ ಹಾಗೂ ನೆಕ್ ಬ್ಯಾಂಡ್ ಧರಿಸಿರಬೇಕು ಎಂದು ತಿಳಿಸಲಾಗಿದೆ.
ಕೊರೊನಾ ವೈರಸ್ ನಿಯಂತ್ರಣ ಮಾಡಲು ಮೇ 13 ರಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿ, ವಕೀಲರು ಸದ್ಯಕ್ಕೆ ಕೋಟ್ ಮತ್ತು ಗೌನ್ ಧರಿಸುವ ಅಗತ್ಯ ಇಲ್ಲ ಎಂದು ಸೂಚನೆ ನೀಡಿತ್ತು. ಈ ನಿರ್ದೇಶನದ ಮೇರೆಗೆ ಹೈಕೋರ್ಟ್ ಸುತ್ತೋಲೆ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ಈ ಡ್ರೆಸ್ ಕೋಡ್ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.