ಬೆಂಗಳೂರು: ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯದಲ್ಲಿ ಶಾಸಕರು, ಸಂಸದರು ಹಾಗೂ ಎಂ ಎಲ್ ಸಿಗಳ ವಿರುದ್ಧ ಬಾಕಿ ಇರುವ ಪ್ರಕರಣಗಳ ಮಾಹಿತಿಯನ್ನು ಸಲ್ಲಿಸುವಂತೆ ಹೈಕೋರ್ಟ್ ತನ್ನ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶಿಸಿದೆ.
ಜನಪ್ರತಿನಿಧಿಗಳ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ಪ್ರಗತಿಯ ಮೇಲ್ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಪ್ರಕರಣದಲ್ಲಿ ಹೈಕೋರ್ಟ್ ಗೆ ನೆರವು ನೀಡಲು ನೇಮಕ ಮಾಡಿರುವ ಅಮಿಕಸ್ ಕ್ಯೂರಿ ಹಾಗೂ ಹಿರಿಯ ವಕೀಲ ಆದಿತ್ಯ ಸೋಂಧಿ ಹಾಗೂ ಅಡ್ವೊಕೇಟ್ ಜನರಲ್ ಅವರ ವಾದ ಆಲಿಸಿದ ಪೀಠ ಸ್ಪೆಷಲ್ ಕೋರ್ಟ್ ಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ಸಲ್ಲಿಸುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿತು.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸ್ಥಾಪಿಸಿ ಹೊರಡಿಸಲಾದ ಆದೇಶದ ಪ್ರತಿ ವಿಶೇಷ ನ್ಯಾಯಾಲಯದಲ್ಲಿ ಎಷ್ಟು ಪ್ರಕರಣಗಳು ಬಾಕಿ ಇವೆ ಮತ್ತು ಯಾವ್ಯಾವ ಹಂತಗಳಲ್ಲಿವೆ ಎಂಬ ಬಗ್ಗೆ ಜಿಲ್ಲಾವಾರು ವಿವರಗಳ ಮಾಹಿತಿ ಸಲ್ಲಿಸಬೇಕು. ಹಾಗೆಯೇ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಪ್ರಕರಣಗಳ ಆದೇಶ ಪ್ರತಿಗಳನ್ನು ಪಡೆದುಕೊಂಡು ಮುಂದಿನ ಒಂದು ವಾರದೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿತು. ಅದೇ ರೀತಿ ಸರ್ಕಾರ ವಿಶೇಷ ನ್ಯಾಯಾಲಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಗಳ ಲಭ್ಯತೆ ಹಾಗೂ ಮೂಲ ಸೌಕರ್ಯಗಳ ಸ್ಥಿತಿಗತಿ ಯಾವ ರೀತಿ ಇದೆ ಎಂಬುದರ ಮಾಹಿತಿ ಸಲ್ಲಿಸಬೇಕು.
ಇನ್ನೂ, ಸಾಕ್ಷಿಗಳ ವಿಚಾರಣೆಗೆ ಸುರಕ್ಷಿತ ಮತ್ತು ಸುಸಜ್ಜಿತ ಪ್ರತ್ಯೇಕ ಕೊಠಡಿಯನ್ನು ಈಗ ವಿಶೇಷ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿರುವ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಸ್ಥಾಪಿಸುವ ಬಗ್ಗೆ ಮತ್ತು ಈ ವಿಚಾರದಲ್ಲಿ ಸರ್ಕಾರಕ್ಕೆ ನೀಡಲು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚಿಸಿತು. ಸರ್ಕಾರ ಹಾಗೂ ರಿಜಿಸ್ಟ್ರಾರ್ ಜನರಲ್ ಅವರು ಸಲ್ಲಿಸುವ ವಿವರಗಳ ಒಂದು ಪ್ರತಿಯನ್ನು ಹೈಕೋರ್ಟ್ ನೇಮಿಸಿರುವ ಅಮಿಕಸ್ ಕ್ಯೂರಿ ಅವರಿಗೆ ಒದಗಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಅ. 5ಕ್ಕೆ ಮುಂದೂಡಿತು