ಬೆಂಗಳೂರು: ರಾಜ್ಯದಲ್ಲಿ ಜಾನುವಾರುಗಳ ಗಣತಿಯನ್ನು ಯಾವಾಗ ನಡೆಸಲಾಗಿದೆ ಎಂದು ಪ್ರಶ್ನಿಸಿರುವ ಹೈಕೋರ್ಟ್, ಈ ಕುರಿತು ಲಭ್ಯವಿರುವ ಎಲ್ಲ ಮಾಹಿತಿಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಬರ ನಿರ್ವಹಣೆ, ಗೋಶಾಲೆಗಳ ಸ್ಥಿತಿಗತಿ, ಜಾನುವಾರುಗಳಿಗೆ ಮೇವು, ಕುಡಿಯುವ ನೀರು, ಔಷಧ ಒದಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಚೇಳೋರು ಗ್ರಾಮದ ಎ. ಮಲ್ಲಿಕಾರ್ಜುನ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಸರ್ಕಾರದ ಪರ ವಕೀಲರು ವಾದ ಮಂಡಿಸಿ ಲಭ್ಯವಿರುವ ಗಣತಿಯ ದಾಖಲೆಗಳ ಪ್ರಕಾರ ರಾಜ್ಯದಲ್ಲಿ 1.15 ಕೋಟಿ ಹಸು, ಎತ್ತು, ಎಮ್ಮೆ, ಕೋಣಗಳಿವೆ. ಅದೇ ರೀತಿ 1.72 ಕೋಟಿ ಸಣ್ಣ ಜಾನುವಾರುಗಳಾದ ಕುರಿ, ಮೇಕೆಗಳಿವೆ. ಸದ್ಯ 136 ಲಕ್ಷ ಟನ್ ಮೇವು ದಾಸ್ತಾನು ಇದೆ. ಈ ಮೇವು ಮುಂದಿನ 25 ವಾರಗಳಿಗೆ ಆಗಲಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಾಜ್ಯದಲ್ಲಿ ಮೆಲುಕು ಹಾಕುವ ಜಾನುವಾರುಗಳ ಗುಂಪಿಗೆ ಸೇರುವ ಹಸು, ಎತ್ತು, ಎಮ್ಮೆ, ಕೋಣ, ಕುರಿ, ಮೇಕೆಗಳ ಗಣತಿ ಯಾವಾಗ ನಡೆಸಲಾಗಿದೆ. ಮತ್ತು ಈ ಕುರಿತು ಲಭ್ಯವಿರುವ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು. ಜೊತೆಗೆ, ಬಿಡಾಡಿ ದನಗಳ ಮೇವಿಗೆ ಎನ್‍ಜಿಒಗಳ ಮೂಲಕ 64.75 ಲಕ್ಷ ರೂ. ನೀಡಲಾಗಿದೆ ಎಂದು ಸರ್ಕಾರ ಹೇಳಿದೆ, ಈ ಹಣ ಹಂಚಿಕೆಯ ವಿವರಗಳನ್ನೂ ಸಲ್ಲಿಸಬೇಕೆಂದು ಪೀಠ ಸೂಚಿಸಿತು.