ಬೆಂಗಳೂರು : ದಿವ್ಯಾಂಗರಿಗೆ ಶೇ.5ರಷ್ಟು ನಿವೇಶನವನ್ನು ಮೀಸಲಿಡುವ ಮತ್ತು ಹಂಚಿಕೆಯಾಗುವ ನಿವೇಶನಕ್ಕೆ ರಿಯಾಯಿತಿ ದರ ನಿಗದಿಪಡಿಸುವ ಕುರಿತು ಎರಡು ವಾರಗಳಲ್ಲಿ ಉತ್ತರ ನೀಡುವಂತೆ ಹೈಕೋರ್ಟ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದೆ.
ಈ ಕುರಿತು ಕರ್ನಾಟಕ ರಾಜ್ಯ ವಿಕಲಚೇತನ ರಕ್ಷಣಾ ಸಮಿತಿ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಎಸ್.ಸಿ ಶರ್ಮಾ ಅವರಿದ್ದ ವಿಭಾಗೀಯಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, 2019ರ ಅ.22ರಂದು ನಡೆದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಬಿಡಿಎಗೆ ಹಂಚಿಕೆ ಮಾಡಲಿರುವ 5 ಸಾವಿರ ನಿವೇಶನಗಳ ಪೈಕಿ ದಿವ್ಯಾಂಗರಿಗೆ ಎಷ್ಟು ನಿವೇಶನಗಳನ್ನು ಮೀಸಲಿಟ್ಟಿದೆ ಎಂಬ ಕುರಿತು ಹಾಗೂ ದರ ರಿಯಾಯಿತಿ ನೀಡುವ ಕುರಿತು ಉತ್ತರಿಸುವಂತೆ ಬಿಡಿಎಗೆ ತಿಳಿಸಿತ್ತು. ಆದರೆ, ಪ್ರಾಧಿಕಾರ ಈವರೆಗೂ ಉತ್ತರ ನೀಡಿಲ್ಲ ಎಂದರು.
ಇದಕ್ಕೆ ಬಿಡಿಎ ಪರ ವಕೀಲರು ಉತ್ತರಿಸಿ, ನ್ಯಾಯಾಲಯದ ನಿರ್ದೇಶನದ ಬಗ್ಗೆ ಮಾಹಿತಿ ಪಡೆದು ಸಲ್ಲಿಸಲಾಗುವುದು. ಅದಕ್ಕಾಗಿ ಎರಡು ವಾರ ಕಾಲಾವಕಾಶ ನೀಡಬೇಕೆಂದರು. ಕೋರಿಕೆ ಪರಿಗಣಿಸಿದ ಪೀಠ, ವಿಚಾರಣೆಯನ್ನು ಎರಡು ವಾರ ಮುಂದೂಡಿ ಅಷ್ಟರಲ್ಲಿ ನ್ಯಾಯಾಲಯ ಹಿಂದೆ ನೀಡಿರುವ ನಿರ್ದೇಶನದ ಪಾಲನೆ ಕುರಿತು ಮಾಹಿತಿ ಸಲ್ಲಿಸುವಂತೆ ಸೂಚಿಸಿತು.
ಅರ್ಜಿದಾರರು ನಿಯಮದಂತೆ ಬಿಡಿಎ ತನ್ನ ಬಡಾವಣೆಗಳಲ್ಲಿ ಶೇ.5ರಷ್ಟು ನಿವೇಶನಗಳನ್ನು ದಿವ್ಯಾಂಗರಿಗೆ ಮೀಸಲಿಡುವಂತೆ ಆದೇಶಿಸಬೇಕು ಮತ್ತು ಆ ರೀತಿ ಹಂಚಿಕೆಯಾಗುವ ನಿವೇಶನಗಳಿಗೆ ರಿಯಾಯಿತಿ ದರ ನಿಗದಿಪಡಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.
ಇದನ್ನೂ ಓದಿ: Live video: ಬೆಂಗಳೂರಿನಲ್ಲಿ ನೋಡ ನೋಡುತ್ತಿದ್ದಂತೆ ಕಟ್ಟಡ ಕುಸಿತ.. ಸ್ವಲ್ಪದರಲ್ಲೇ ತಪ್ಪಿದ ಅನಾಹುತ