ಬೆಂಗಳೂರು: ಸಂಸದ ಉಮೇಶ ಜಾಧವ ಪತ್ನಿ ಗಾಯತ್ರಿ ಅವರು ಅಧ್ಯಕ್ಷರಾಗಿರುವ ಮೂರ್ತಿ ಚಾರಿಟಬಲ್ ಟ್ರಸ್ಟ್‌ಗೆ ಶಾಲಾ ಕಟ್ಟಡ ನಿರ್ಮಿಸಲು ನೀಡಲಾಗಿದ್ದ ಸಿಎ ಸೈಟ್ ದುರ್ಬಳಕೆ ಆರೋಪ ಹಿನ್ನೆಲೆ, ನಿವೇಶನ ಮಂಜೂರು ಮಾಡಿದ್ದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಕರ್ನಾಟಕ ಗೃಹ ಮಂಡಳಿಗೆ (ಕೆಎಚ್‌ಬಿ) ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತು ಆದಿನಾರಾಯಣ ಶೆಟ್ಟಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ನಿಯಮಗಳ ಉಲ್ಲಂಘನೆಯಾಗಿರುವ ಕಾರಣ ಮೂರ್ತಿ ಚಾರಿಟಬಲ್ ಟ್ರಸ್ಟ್‌ಗೆ ಮಂಜೂರು ಮಾಡಿರುವ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೆಎಚ್‌ಬಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ಅಲ್ಲದೆ, ಹಕ್ಕು ಪತ್ರ ವಿತರಿಸುವ ಸಂದರ್ಭದಲ್ಲಿ ನಿವೇಶನ ಮಂಜೂರಾತಿ ನಿಯಮಗಳನ್ನು ಸರಳೀಕರಿಸಲಾಗಿತ್ತೆ? ಅಥವಾ ನಿಯಮ ಪಾಲನೆಯಿಂದ ವಿನಾಯಿತಿ ನೀಡಲಾಗಿತ್ತೆ? ಈ ಬಗ್ಗೆ ಯಾವುದಾದರೂ ನಿರ್ಧಾರ ತೆಗೆದಕೊಳ್ಳಲಾಗಿತ್ತೆ? ಎಂದು ಕೆಎಚ್‌ಬಿಯನ್ನು ಪ್ರಶ್ನಿಸಿದ ಪೀಠ, ಈ ಕುರಿತ ಎಲ್ಲ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ನಿಯಮಗಳ ಉಲ್ಲಂಘನೆಯಾಗಿದ್ದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗುವುದು ಎಂದು ಎಚ್ಚರಿಕೆ ನೀಡಿ, ವಿಚಾರಣೆಯನ್ನು ಮಾ.31ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ : ಗಾಯತ್ರಿ ಅಧ್ಯಕ್ಷರಾಗಿರುವ ಮೂರ್ತಿ ಚಾರಿಟಬಲ್ ಟ್ರಸ್ಟ್‌ಗೆ ಶಾಲಾ ಕಟ್ಟಡ ನಿರ್ಮಿಸಲು ಯಲಹಂಕದಲ್ಲಿ ಸಿಎ ನಿವೇಶನ ಮಂಜೂರಾತಿ ಮಾಡಲಾಗಿತ್ತು. ನಿವೇಶನ ಮಂಜೂರಾತಿಯಾಗಿ 16 ವರ್ಷ ಕಳೆದರೂ ಶಾಲಾ ಕಟ್ಟಡ ನಿರ್ಮಿಸಿಲ್ಲ. ಈ ಹಿನ್ನೆಲೆ ಹೈಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರರು ಟ್ರಸ್ಟ್‌ಗೆ ನಿವೇಶನ ಮಂಜೂರು ಮಾಡಿರುವ ಆದೇಶ ರದ್ದುಪಡಿಸಬೇಕು. ನಿವೇಶನದಲ್ಲಿ ಶಾಲಾ ಕಟ್ಟಡ ನಿರ್ಮಿಸಲು ಕೆಎಚ್‌ಬಿ ವಶಕ್ಕೆ ಒಪ್ಪಿಸಬೇಕೆಂದು ಕೋರಿದ್ದಾರೆ.