ಬೆಂಗಳೂರು: ರಾಜ್ಯದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯ ಅನುಷ್ಠಾನವೇ ಆಪತ್ತಿನಲ್ಲಿದೆ. ರಾಜ್ಯ ಸರ್ಕಾರ ಇದರ ಬಗ್ಗೆ ಸರಿಯಾದ ಕ್ರಮ ಕೈಗೊಂಡಿಲ್ಲ. ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಗಳ ರಚನೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಕುರಿತು ನ್ಯಾಯಾಲಯ ಗಮನಿಸಿರುವ ಎಲ್ಲಾ ಅಂಶಗಳ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ
ಈ ಕುರಿತಂತೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಎ. ಮಲ್ಲಿಕಾರ್ಜುನ್ ಹಾಗೂ ಹೈಕೋರ್ಟ್ ಕಾನೂನು ಸೇವಾ ಸಮಿತಿಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ವಿಚಾರಣೆ ವೇಳೆ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ರಾಜ್ಯದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯ ಅನುಷ್ಠಾನಕ್ಕೆ ಕೈಗೊಂಡ ಕ್ರಮದ ಕುರಿತು ವರದಿ ಸಲ್ಲಿಸಿದರು.ಇದನ್ನು ಪರಿಶೀಲಿಸಿದ ನ್ಯಾಯಪೀಠ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಿರುವುದು ವರದಿಯಲ್ಲಿ ಕಾಣುತ್ತಿಲ್ಲ. ಬರ ಅಥವಾ ಪ್ರವಾಹದ ವೇಳೆ ಜಾನುವಾರು ಕಳೆದುಕೊಂಡ ರೈತರಿಗೆ ಪರ್ಯಾಯ ಜಾನುವಾರು ಒದಗಿಸಲು 30 ಸಾವಿರ ರೂಪಾಯಿವರೆಗೆ ವೆಚ್ಚ ಮಾಡಲು ಕೇಂದ್ರ ವಿಪತ್ತು ನಿರ್ವಹಣಾ ನಿಧಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಕೇಂದ್ರ ಹಣ ಕೊಟ್ಟಿರುವಾಗ ಅದರ ಮಾರ್ಗಸೂಚಿಯಂತೆ ರಾಜ್ಯ ಸರಕಾರ ವೆಚ್ಚ ಮಾಡುವುದು ಬಿಟ್ಟು ಅಧಿಕಾರಿಗಳು ಬೇಕಾದ ಹಾಗೆ ನಡೆದುಕೊಳ್ತಿದ್ದಾರೆ ಎಂದು ನ್ಯಾಯಪೀಠ ತರಾಟೆ ತೆಗೆದುಕೊಂಡಿತು.
ಮುಂದಿನ ವಿಚಾರಣೆ ವೇಳೆ ಸರಿಯಾದ ಕ್ರಮ ಕೈಗೊಂಡು ನ್ಯಾಯಪೀಠಕ್ಕೆ ವರದಿಯನ್ನ ಸಲ್ಲಿಕೆ ಮಾಡುವಂತೆ ನಿರ್ದೇಶನ ನೀಡಿ ವಿಚಾರಣೆ ಸೆಪ್ಟೆಂಬರ್ 13ಕ್ಕೆ ಮುಂದೂಡಿಕೆ ಮಾಡಿದೆ.