ಬೆಂಗಳೂರು: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ 2012 (ಪೋಕ್ಸೋ) ಪ್ರಕರಣದ ಆರೋಪಿಯ ಪರ ವಕೀಲರು ಸಂತ್ರಸ್ತೆಯನ್ನು ಪಾಟಿ ಸವಾಲಿಗೊಳಪಡಿಸಲು ಕಾಲಾವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ. ಪ್ರಕರಣದ ಆರೋಪಿಯಾಗಿರುವ ಜಯಣ್ಣ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ, ಅಧೀನ ನ್ಯಾಯಾಲಯದ ಆದೇಶ ರದ್ದು ಪಡಿಸಿದ್ದು, ಅರ್ಜಿಯನ್ನು ಪುರಸ್ಕರಿಸಿದೆ.
ಅಲ್ಲದೆ, ಪೋಕ್ಸೋ ಕಾಯ್ದೆಯ ಸೆಕ್ಷನ್ 33 ರ ಪ್ರಕಾರ ಸಂತ್ರಸ್ತೆಯನ್ನು ಪಾಟಿ ಸವಾಲಿಗಾಗಿ ನ್ಯಾಯಾಲಯಕ್ಕೆ ಪದೇ ಪದೇ ಕರೆಯುವಂತಿಲ್ಲ. ಅಂದ ಮಾತ್ರಕ್ಕೆ ಪಾಟಿ ಸವಾಲು ನಡಸುವ ಅಗತ್ಯವಿಲ್ಲ ಎಂಬುದಲ್ಲ.
ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ನ್ಯಾಯಯುತ ವಿಚಾರಣೆ ಮೂಲಭೂತ ಹಕ್ಕು ಎಂಬುದಾಗಿದೆ. ಜತೆಗೆ, ಪೋಕ್ಸೋ ಪ್ರಕರಣದಲ್ಲಿ ಒಂದು ವರ್ಷದಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು ಎಂದಿದೆ. ಆದರೆ, ಆರೋಪಿಗಳ ವಾದ ಆಲಿಸುವುದಕ್ಕೂ ಅವಕಾಶ ನೀಡಬೇಕು. ಹೀಗಾಗಿ ವಿಚಾರಣಾ ನ್ಯಾಯಾಲಯ, ಸಾಕ್ಷಿಗಳನ್ನು ಪಾಟಿ ಸವಾಲಿಗೆ ಒಳಪಡಿಸುವುದಕ್ಕಾಗಿ ಮತ್ತೊಂದು ಅವಕಾಶವನ್ನು ನೀಡಬೇಕು. ಹೀಗಾಗಿ, ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದು ಪಡಿಸಲಾಗುತ್ತಿದೆ ಎಂದು ಹೈಕೋರ್ಟ್ ತಿಳಿಸಿದೆ.
ಅಲ್ಲದೆ, ವಿಚಾರಣಾ ನ್ಯಾಯಾಲಯವು ಅರ್ಜಿದಾರರಿಗೆ ಎರಡು ಸಾವಿರು ರೂ.ಗಳ ದಂಡ ವಿಧಿಸಿ ಮನವಿ ಪರಿಗಣಿಸಬೇಕು. ಅಲ್ಲದೆ, ಸಂತ್ರಸ್ತೆ ನ್ಯಾಯಾಲಯದ ಮುಂದೆ ಹಾಜರಿದ್ದಲ್ಲಿ ಪಾಟಿ ಸವಾಲು ನಡೆಸುವುದಕ್ಕೆ ಮತ್ತೊಮ್ಮೆ ಕಾಲಾವಕಾಶ ನೀಡುವಂತೆ ಮನವಿ ಮಾಡಬಾರದು ಎಂದು ನ್ಯಾಯಪೀಠ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.
ಇದನ್ನೂ ಓದಿ: 2 ವಿಚ್ಛೇದನ ಅರ್ಜಿ ಸಲ್ಲಿಸಿದ್ದ ಪತಿ: ಕೌಟುಂಬಿಕ ನ್ಯಾಯಾಲಯದ ವಿಚ್ಛೇದನ ರದ್ದುಪಡಿಸಿದ ಹೈಕೋರ್ಟ್
ಪ್ರಕರಣದ ಹಿನ್ನೆಲೆ ಏನು ? ಅರ್ಜಿದಾರರಾದ ಜಯಣ್ಣ ಎಂಬುವರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ 2012( ಪೋಕ್ಸೋ) ಆರೋಪಿಯಾಗಿದ್ದರು. ಸಂತ್ರಸ್ತೆ ಪಾಟಿ ಸವಾಲು ನಡೆಸುವುದು ಮತ್ತು ತನಿಖಾಧಿಕಾರಿಗಳು ಅವರನ್ನು ಪಾಟಿ ಸವಾಲಿಗಾಗಿ ಕರೆ ತಂದಾಗ ಅರ್ಜಿದಾರರ ಪರ ವಕೀಲರು, ಸಂತ್ರಸ್ತೆಯ ಪಾಟಿ ಸವಾಲು ನಡೆಸುವುದಕ್ಕೆ ಕಾಲಾವಕಾಶವನ್ನು ಕೋರುತ್ತಿದ್ದರು. ಇದಾದ ಬಳಿಕ ಸಂತ್ರಸ್ತೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಬಳಿಕ ಪೊಲೀಸರು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ವಿಚಾರಣೆ ಮುಂದೂಡುವಂತೆ ಮನವಿ ಮಾಡಿದ್ದರು. ಇದನ್ನು ನ್ಯಾಯಾಧೀಶರು ತಿರಸ್ಕರಿಸಿದ್ದರು. ಈ ಕಾರಣದಿಂದ ಸಂತ್ರಸ್ತೆಯನ್ನು ಪಾಟಿ ಸವಾಲು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಪಾಟಿ ಸವಾಲನ್ನು ಶೂನ್ಯ ಎಂಬುದಾಗಿ ಪರಿಗಣಿಸಲಾಗಿತ್ತು.
ಸಂತ್ರಸ್ತೆಯನ್ನು ಮತ್ತೊಮ್ಮೆ ಪಾಟಿ ಸವಾಲಿಗೆ ಅವಕಾಶ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ರದ್ದು ಪಡಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಮಗಳ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಗೆ 25 ವರ್ಷಗಳ ಜೈಲು ಶಿಕ್ಷೆ..!