ಬೆಂಗಳೂರು: ಬಾಬಾ ಬುಡನ್ ಗಿರಿ ದತ್ತ ಪೀಠದಲ್ಲಿ ಡಿಸೆಂಬರ್ 6 ರಿಂದ ಮೂರು ದಿನಗಳ ಕಾಲ ಸರ್ಕಾರ ರಚನೆ ಮಾಡಿರುವ ಸಮಿತಿಯಿಂದ ದತ್ತ ಜಯಂತಿ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಲೋಕ್ ಆರಾಧೆ ಮತ್ತು ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ಸರ್ಕಾರ ರಚನೆ ಮಾಡಿರುವ ಸಮಿತಿ ಭಕ್ತರಿಂದ ಪೂಜಾವಿಧಿ ವಿಧಾನ ನಡೆಸುವುದು, ದತ್ತ ಪಾದುಕೆ ಪೂಜೆ ಮಾಡಲು ಅನುಮತಿ ನೀಡಿ ವಿಚಾರಣೆಯನ್ನು 2023ರ ಜನವರಿ 12ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹಾಜರಾಗಿ, ಸರ್ಕಾರ ಈಗಾಗಲೇ ನಿರ್ವಹಣಾ ಸಮಿತಿ ರಚಿಸಿದೆ. ಹಿಂದೂ, ಮುಸ್ಲಿಂ ಸದಸ್ಯರ ಸಮಿತಿಯಿಂದ ಅರ್ಚಕ, ಮುಜಾವರ್ ನೇಮಕ ಮಾಡಲಾಗಿದೆ. ನಿತ್ಯ ಎರಡೂ ಸಮುದಾಯದವರೂ ಪೂಜೆ ನಡೆಸುತ್ತಿದ್ದಾರೆ. ಹೀಗಾಗಿ ದತ್ತ ಜಯಂತಿಗೆ ಅನುಮತಿ ನೀಡಲು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ನ್ಯಾಯಪೀಠ ದತ್ತ ಜಯಂತಿ ಆಚರಣೆಗೆ ಅನುಮತಿ ನೀಡಿತ್ತು.
ಪ್ರಕರಣದ ಹಿನ್ನೆಲೆ ಏನು?: ಬಾಬಾಬುಡನ್ ಗಿರಿ ಇನಾಂ ದತ್ತಾತ್ರೇಯ ಪೀಠದಲ್ಲಿ ಹಿಂದೂ ಸಂಪ್ರದಾಯದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಅರ್ಚಕ, ಮುಸ್ಲಿಂ ಸಮುದಾಯದ ಮುಜಾವರ್ ನೇಮಕ ಮಾಡಿ ರಾಜ್ಯ ಸರ್ಕಾರ 2018ರ ಮಾ.16ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಶ್ರೀ ಗುರು ದತ್ತಾತ್ರೇಯ ದೇವಸ್ಥಾನ ಸಂವರ್ಧನಾ ಸಮಿತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಸರ್ಕಾರದ ಆದೇಶವನ್ನು ರದ್ದುಪಡಿಸಿ 2021ರ ಡಿ.28ರಂದು ಆದೇಶಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ನ್ಯಾ. ನಾಗಮೋಹನ್‌ದಾಸ್ ಸಮಿತಿಯ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಪ್ರಕರಣವನ್ನು ಕಾನೂನು ರೀತಿ ಹೊಸದಾಗಿ ಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ನಡುವೆ ಏಕ ಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಷಾ ಖಾದ್ರಿ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ, ಗಡಿಯಲ್ಲಿ ಹೈ ಅಲರ್ಟ್