ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ದಿನನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆಯ ಕಿರಿಕಿರಿ ತಪ್ಪಿಸುವ ಸಲುವಾಗಿ ಶಾಲೆಗಳು ಮತ್ತು ಕೈಗಾರಿಕೆಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆ ಕುರಿತಂತೆ ಪರಿಶೀಲನೆ ನಡೆಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸಲಹೆ ಕೊಟ್ಟಿದೆ.
ಬಳ್ಳಾರಿ ರಸ್ತೆ ಅಗಲೀಕರಣ ಸಂಬಂಧ ಸರ್ಕಾರೇತರ ಸಂಘ ಸಂಸ್ಥೆ ಸಮರ್ಪಣಾ ಸಾಮಾಜಿಕ- ಸಾಂಸ್ಕೃತಿಕ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ಶಾಲೆಗಳು, ಕೈಗಾರಿಕೆಗಳು, ಫ್ಯಾಕ್ಟರಿಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಸಂಬಂಧಿಸಿದ ಪಾಲುದಾರರ ಸಭೆ ಕರೆದು ಚರ್ಚೆ ನಡೆಸುವಂತೆ ನ್ಯಾಯಾಲಯ ತಿಳಿಸಿದೆ. ರಾಜ್ಯ ಸರ್ಕಾರ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಮೂಲಕ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಶಾಲಾ ಬಸ್ ಆಪರೇಟರ್‌ಗಳು, ಪೋಷಕರ ಸಂಘಗಳು ಸೇರಿ ಸಂಬಂಧಿಸಿದ ಎಲ್ಲರ ಸಭೆ ಕರೆದು ವಾಹನ ದಟ್ಟಣೆ ತಗ್ಗಿಸಲು ಶಾಲಾ ಸಮಯ ಬದಲಾವಣೆ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬಹುದು ಎಂದು ನಿರ್ದೇಶಿಸಿದೆ.
ಶಾಲಾ ಮಕ್ಕಳ ಸುರಕ್ಷತೆ ಮತ್ತು ಭದ್ರತೆಯನ್ನೂ ಪರಿಗಣಿಸಬೇಕಾಗುತ್ತದೆ. ಕೈಗಾರಿಕೆ ಮತ್ತು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮೂಲಕ ಎಲ್ಲ ಕೈಗಾರಿಕೆಗಳ ಒಕ್ಕೂಟಗಳು, ಫ್ಯಾಕ್ಟರಿಗಳು, ಕಾರ್ಮಿಕ ಸಂಘಟನೆಗಳು, ಚೇಂಬರ್ ಆಫ್ ಕಾರ್ಮಸ್, ಕಂಪನಿಗಳ ಪ್ರತಿನಿಗಳ ಜತೆ ಚರ್ಚೆ ನಡೆಸಿ ಕೆಲಸದ ಸಮಯವನ್ನು ಬದಲಾವಣೆ ಮಾಡಬಹುದು.
ದುಡಿಯುವ ಸಮಯ ಫ್ಲೆಕ್ಸಿಬಲ್ ಮಾಡುವುದು, ಪೀಕ್ ಅವರ್ನಲ್ಲಿ ವಾಹನ ದಟ್ಟಣೆಗಳನ್ನು ತಗ್ಗಿಸುವ ಸಂಬಂಧ ಸಂಬಂಧಿಸಿದ ಎಲ್ಲರಿಂದಲೂ ಸಲಹೆ-ಸೂಚನೆಗಳನ್ನು ಪಡೆದು ಸರ್ಕಾರ ಮುಂದುವರಿಯಬಹುದು ಎಂದು ನ್ಯಾಯಪೀಠ ಹೇಳಿತು.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮಾರ್ಗದ ಸಾದಹಳ್ಳಿ ಗೇಟ್ನಿಂದ ಹೆಬ್ಬಾಳ ಮೇಲು ಸೇತುವೆವರೆಗೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಭಾರಿ ವಾಹನಗಳು ನಗರಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸುವ ಕುರಿತು ಸರ್ಕಾರ ಸಲ್ಲಿಸಿದ್ದ ಪ್ರಮಾಣಪತ್ರ ನ್ಯಾಯಪೀಠ ಪರಿಶೀಲಿಸಿತು. 2014ರಲ್ಲಿ ನಗರ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶ ಉಲ್ಲೇಖಿಸಿದ ನ್ಯಾಯಪೀಠ, ನಮ್ಮ ಪ್ರಕಾರ ಈ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದೇ ಆದಲ್ಲಿ ವಾಹನ ದಟ್ಟಣೆ ಖಂಡಿತವಾಗಿಯೂ ತಗ್ಗುತ್ತದೆ ಎಂದಿತು.
ಮೆಟ್ರೊ ರೈಲು ಮಾರ್ಗ ವಿಸ್ತರಣೆ, ರೈಲುಗಳ ಸಮಯ ವಿಸ್ತರಣೆ ಸೇರಿದಂತೆ 2023-24ನೇ ವರ್ಷಕ್ಕೆ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸಬೇಕು. ಆ ಕಾರ್ಯವನ್ನು ತ್ವರಿತವಾಗಿ ಮಾಡಬೇಕು. ವಾಹನ ಸಂಚಾರ ದಟ್ಟಣೆ ನಿಯಂತ್ರಣ ಸಂಬಂಧ ಅರ್ಜಿದಾರರ ಸಂಸ್ಥೆ ನೀಡಿರುವ ಸಲಹೆಗಳು, ಈ ನ್ಯಾಯಪೀಠ ನೀಡಿರುವ ನಿರ್ದೇಶನಗಳನ್ನು ಆಧರಿಸಿ ವಾಹನ ದಟ್ಟಣೆ ತಗ್ಗಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ಸಂಬಂಧ ಮುಂದಿನ ಆರು ವಾರಗಳಲ್ಲಿ ವಸ್ತು ಸ್ಥಿತಿ ವರದಿ ಹಾಗೂ ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ವೈದ್ಯಕೀಯ ಸೀಟುಗಳ ಪ್ರವೇಶ ಅಕ್ರಮವೆಂದ ರಾಷ್ಟ್ರೀಯ ವೈದ್ಯಕೀಯ ಆಯೋಗ: ಹೈಕೋರ್ಟ್ ಮೊರೆ ಹೋದ ವಿದ್ಯಾರ್ಥಿಗಳು