ಬೆಂಗಳೂರು: ನಗರದಲ್ಲಿ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಸಲ್ಲಿಕೆಗೆ ಬಿಬಿಎಂಪಿ ಪರ ವಕೀಲರು ಕಾಲಾವಕಾಶ ಕೋರಿದ್ದರಿಂದ ವಿಚಾರಣೆಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.
ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಾಲಯ, ರಾಜಕಾಲುವೆ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆಯೇ? ಎಷ್ಟು ಒತ್ತುವರಿಯಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ನೀವು ಹಳೆಯ ಅಂಕಿ-ಸಂಖ್ಯೆ ನೀಡಬೇಡಿ. ಈಗ ಎಷ್ಟು ಒತ್ತುವರಿ ಆಗಿದೆ ಎಂಬ ಅಂಕಿ ಅಂಶ ನೀಡಬೇಕು ಎಂದು ಪೀಠ ಸೂಚನೆ ನೀಡಿತ್ತು.
ಅಲ್ಲದೆ, ಇದೇ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠವು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿತು. ಇದರ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿದೆ.
ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ, ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ಸಂಬಂಧ ಈ ಹಿಂದೆ (ಸೆ.7ರಂದು) ನೀಡಿದ್ದ ನಿರ್ದೇಶನಗಳನ್ನು ಜಾರಿ ಮಾಡಿರುವ ಸಂಬಂಧದ ಅನುಪಾಲನೆ ವರದಿ ಸಲ್ಲಿಸಬೇಕು. ಈ ವರದಿಯನ್ನು ಶುಕ್ರವಾರ ಪರಿಶೀಲಸಲಾಗುವುದು ಎಂದು ಪೀಠ ತಿಳಿಸಿತ್ತು.
ಇದನ್ನೂ ಓದಿ: 4 ವಲಯಗಳ 29 ಸ್ಥಳಗಳಲ್ಲಿ ಒತ್ತುವರಿ ತೆರವು: ಬಿಬಿಎಂಪಿ