ಬೆಂಗಳೂರು : ಪರಿಷತ್ ನಾಮನಿರ್ದೇಶನ ಸಂಬಂಧ ರಾಜ್ಯಪಾಲರು ವರದಿ ಕೇಳಿರುವ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಮ್ಮ ಹೈಕಮಾಂಡ್ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾತನಾಡಿದ ಅವರು, ಸರ್ಕಾರ ಅಭ್ಯರ್ಥಿಗಳ ನಾಮನಿರ್ದೇಶನ ಶಿಫಾರಸು ಮಾಡಿದೆಯೋ, ಮಾಡಿಲ್ಲವೋ ಅನ್ನೋದನ್ನು ಮಾತನಾಡಲ್ಲ. ಸಿಎಂ ಹಾಗೂ ನಮ್ಮ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಅಲ್ಪಸಂಖ್ಯಾತ ನಾಯಕರು ಮುಂಬರುವ ಪಾಲಿಕೆ ಚುನಾವಣೆಯಲ್ಲಿ ತಮ್ಮ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೇಳಿದ್ದಾರೆ. ಬಿಜೆಪಿ ಸರ್ಕಾರ ವಾರ್ಡ್ ಮರುವಿಂಗಡಣೆ ಹೆಸರಲ್ಲಿ ಇವರ ಕ್ಷೇತ್ರಗಳನ್ನು ವಿಭಜಿಸಿ, ನಮ್ಮ ಸಮುದಾಯದವರು ಅವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಾಗದ ರೀತಿಯಲ್ಲಿ ಮಾಡಿದ್ದರು. ಆ ಮೂಲಕ ಅವರ ಮತಗಳನ್ನು ಒಡೆಯುವ ಕೆಲಸ ಮಾಡಲಾಗಿತ್ತು. ಹೀಗಾಗಿ ಅಲ್ಪಸಂಖ್ಯಾತರು ತಮ್ಮ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕೇಳಿದ್ದಾರೆ. ಈ ವಿಚಾರವನ್ನು ಪಾಲಿಕೆ ಚುನಾವಣೆ ಸಮಿತಿ ಮುಂದಿಡಲಾಗುವುದು. ಅವರ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಸ್ಥಾನಮಾನ ನೀಡಲಾಗುವುದು ಎಂದು ಡಿಕೆಶಿ ಹೇಳಿದರು.
ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಸಂಸತ್ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಎಲ್ಲರೂ ಒಂದಾಗಿ ಕೆಲಸ ಮಾಡಿ ದೇಶ ರಕ್ಷಣೆ ಮಾಡಬೇಕು. ಇಂಡಿಯಾ ಗೆಲ್ಲಿಸಬೇಕು ಎಂಬುದು ನಮ್ಮೆಲ್ಲರ ಅಜೆಂಡಾ ಎಂದರು. ಲೋಕಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ 2 ಸ್ಥಾನ ನೀಡಬೇಕು ಎಂಬ ಬೇಡಿಕೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಅವರ ಬೇಡಿಕೆಯಂತೆ ಸ್ಥಾನ ನೀಡಬೇಕು, ಅದರಲ್ಲಿ ತಪ್ಪೇನಿದೆ?. ಅವರ ಜನಸಂಖ್ಯೆ ಅನುಗುಣವಾಗಿ ಅವರಿಗೆ ಪ್ರಾತಿನಿಧ್ಯ ನೀಡಬೇಕು. ಎಲ್ಲಿ ಅವರು ಗೆಲ್ಲುವ ಅವಕಾಶ ಇರುತ್ತದೆಯೋ ಅಲ್ಲಿ ಟಿಕೆಟ್ ನೀಡಲಾಗುವುದು. ಅಲ್ಪಸಂಖ್ಯಾತರು ಎಲ್ಲೆಲ್ಲಿ ನಿಲ್ಲಲು ಅವಕಾಶ ಇದೆ. ಅವರ ಪಾಲು ಏನಿದೆ ಅವರಿಗೆ ನೀಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಶಾಸಕರ ಜತೆಗಿನ ಸಭೆ ಕುರಿತು ಕೇಳಿದಾಗ, "ಮುಖ್ಯಮಂತ್ರಿಗಳು ಹಾಗೂ ನಾನು ನಮ್ಮ ಪಕ್ಷದ ಶಾಸಕರ ಜತೆ ಚರ್ಚೆ ಮಾಡುವುದಾಗಿ ಹೇಳಿದ್ದು, ಅದಕ್ಕಾಗಿ ಕೆಲವು ಜಿಲ್ಲೆಗಳ ಶಾಸಕರ ಸಭೆ ನಾಳೆ ಕರೆದಿದ್ದೇವೆ. ಅಲ್ಲಿ ಶಾಸಕರ ಜತೆ ಚರ್ಚೆ ಮಾಡುತ್ತೇವೆ" ಎಂದ ಡಿಸಿಎಂ, ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, ಸಮಯ ಬಂದಾಗ ನಾನು ಉತ್ತರ ನೀಡುತ್ತೇನೆ. ನನಗೂ ಅವರ ಬಗ್ಗೆ ಗೊತ್ತಿದೆ. ಅವರ ವಿರುದ್ಧ, ಅವರ ತಂದೆ ವಿರುದ್ಧ ನಾನು ಸ್ಪರ್ಧಿಸಿದ್ದೇನೆ. ಅವರ ಪತ್ನಿ ವಿರುದ್ಧ ನನ್ನ ತಮ್ಮ ಸ್ಪರ್ಧಿಸಿದ್ದಾರೆ. ಕಾದು ನೋಡಿ, ಈಗ ನಾನು ಹೆಚ್ಚಾಗಿ ಚರ್ಚೆ ಮಾಡುವುದಿಲ್ಲ ಎಂದು ಸೂಚ್ಯವಾಗಿ ನುಡಿದರು.
ಇದನ್ನೂ ಓದಿ : ಕುಮಾರಸ್ವಾಮಿ ಪ್ರಧಾನ ಮಂತ್ರಿವರೆಗೆ ಹೋಗಿದ್ದಾರೆ.. ಅದಕ್ಕೆ ತಕ್ಕಂತೆ ಉತ್ತರ ನೀಡುತ್ತೇನೆ: ಡಿಸಿಎಂ ಡಿ ಕೆ ಶಿವಕುಮಾರ್