ಬೆಂಗಳೂರು: ಆರ್ ಆರ್ ನಗರ ಉಪಚುನಾವಣೆ ಅಭ್ಯರ್ಥಿ ಸಂಬಂಧ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದು ಸಚಿವ ಎಸ್. ಟಿ. ಸೋಮಶೇಖರ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಟಿಕೆಟ್ ಗಾಗಿ ಎಲ್ಲಾ ಆಕಾಂಕ್ಷಿಗಳು ಪ್ರಯತ್ನ ಪಡುತ್ತಿದ್ದಾರೆ. ಕೋರ್ ಕಮಿಟಿಯಲ್ಲಿ ಇಂದು ಸಂಜೆ ತೀರ್ಮಾನಿಸಲಾಗುತ್ತದೆ. ಬಳಿಕ ಬಿಜೆಪಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಅದಕ್ಕೂ ಮುನ್ನ ಯಾರಿಗೆ ಟಿಕೆಟ್ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪಕ್ಷದಲ್ಲೊಂದು ವ್ಯವಸ್ಥೆ ಇದೆ. ಪಕ್ಷದ ಚೌಕಟ್ಟಿನಲ್ಲೇ ಎಲ್ಲವೂ ನಡೆಯುತ್ತದೆ ಎಂದು ವಿವರಿಸಿದರು.
ಕೋರ್ ಕಮಿಟಿ ಸಭೆಗೂ ಮುನ್ನ ನಾಯಕರನ್ನು ಭೇಟಿ ಮಾಡಿ ಆಕಾಂಕ್ಷಿಗಳು ಮನವಿ ಮಾಡಬೇಕು. ಆರ್. ಶಂಕರ್ ಹೊರತುಪಡಿಸಿ ಎಲ್ಲರಿಗೂ ಟಿಕೆಟ್ ನೀಡಿದ್ದಾರೆ. ಇವತ್ತು ಇವುಗಳ ಬಗ್ಗೆ ಚರ್ಚೆ ಆಗಲಿದೆ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದ್ದು, ಗೆಲುವಿನ ಸಾಧ್ಯತೆ, ಸಾಧಕ-ಬಾಧಕ ನೋಡಿಕೊಂಡು ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ಸಚಿವರು ಹೇಳಿದರು.