ಬೆಂಗಳೂರು: ಕರ್ನಾಟಕ ತಮಿಳುನಾಡು ಗಡಿಯ ಹೊಸೂರು ಜವಳಗಿರಿಯಲ್ಲಿ ಕಾಡಿನಲ್ಲಿ ಎಪ್ಪತ್ತಕ್ಕೂ ಅಧಿಕ ಕಾಡಾನೆಗಳು ಬೀಡು ಬಿಟ್ಟಿರುವ ದೃಶ್ಯಾವಳಿಗಳನ್ನು ಅರಣ್ಯಾಧಿಕಾರಿಗಳು ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಅಧಿಕಾರಿಗಳು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಂಚಲನ ಮೂಡಿಸಿದೆ. ಈ ಆನೆಗಳು ಬನ್ನೇರುಘಟ್ಟ ಅರಣ್ಯದಿಂದ ವಲಸೆ ಬಂದ ಕಾಡಾನೆಗಳು ಎಂದು ಗುರುತಿಸಲಾಗಿದೆ.
ಪ್ರತಿವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ಕರ್ನಾಟಕದಿಂದ ವಲಸೆ ಬರುವ ಆನೆ ಹಿಂಡು ಸಹಜವಾಗಿ ತಮಿಳುನಾಡಿನ ಹೊಸೂರು, ಸೂಳಗಿರಿ, ಬೇರಕಿ, ಕರ್ನಾಟಕದ ಮಾಸ್ತಿ, ಟೇಕಲ್, ಮಾಲೂರು, ಕೆಜಿಎಫ್ ಮೂಲಕ ಹೊಸಕೋಟೆಯತ್ತ ಜಾಡು ಹಿಡಿಯುತ್ತವೆ. ಹಾಗೆಯೇ ಎಲ್ಲಿಯಾದರೂ ಆನೆಗಳಿಗೆ ಮೇವು ನೀರು, ದಟ್ಟ ಮರಗಳು ಸಿಕ್ಕರೆ ಅಲ್ಲೇ ದಿನಗಟ್ಟಲೆ ಆಶ್ರಯ ಪಡೆಯುವ ಜಾಯಮಾನ ಈ ಗುಂಪಿಗಿದೆ. ಹೀಗಾಗಿ ತಮಿಳುನಾಡು ಗಡಿ ದಾಟಿರುವ 10ಕ್ಕೂ ಹೆಚ್ಚು ಕಾಡಾನೆಗಳು ಜವಳಗಿರಿ ಡೆಂಕಣಿಕೋಟೆ ಮೂಲಕ ಹೊಸೂರು ಅರಣ್ಯ ಪ್ರದೇಶದಲ್ಲಿ ಆಶ್ರಯ ಪಡೆದಿವೆ.
ರೈತರ ರಾಗಿ ಬೆಳೆ ನಾಶ ಮಾಡುವ ಸಾಧ್ಯತೆ ಹಿನ್ನೆಲೆ ಅರಣ್ಯ ಅಧಿಕಾರಿಗಳು ಮತ್ತು ಫಾರೆಸ್ಟ್ ಗಾರ್ಡ್ಗಳು ನಿಗಾ ವಹಿಸಿದ್ದು, ಆನೆಗಳನ್ನು ಕರ್ನಾಟಕ ಗಡಿಯತ್ತ ಓಡಿಸಲು ತಮಿಳುನಾಡು ವಾಚರ್ಗಳು ಹರಸಾಹಸ ಪಡುತ್ತಿದ್ದಾರೆ. ಅರಣ್ಯದ ಗಡಿಯಲ್ಲಿರುವ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಅರಣ್ಯ ಇಲಾಖೆ ಸೂಚನೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಕಾಡಾನೆ ಹಾವಳಿ: ಡ್ರೋನ್ ಕ್ಯಾಮರಾದಲ್ಲಿ 7 ಆನೆಗಳು ಸೆರೆ