ಬೆಂಗಳೂರು: ಕಳೆದ ದಿನ ರಾಜ್ಯದ ವಿವಿಧೆಡೆ ಭಾರೀ ಗಾಳಿ ಸಹಿತ ಮಳೆ ಸುರಿದಿದ್ದು, ಅನೇಕ ಅವಾಂತರಗಳು ಸುಷ್ಟಿಯಾಗಿವೆ. ಅಷ್ಟೇ ಅಲ್ಲ, ಚಿಕ್ಕಮಗಳೂರು, ಕೊಪ್ಪಳ, ಮೈಸೂರು, ಬಳ್ಳಾರಿ ಮತ್ತು ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಸಾವು ನೋವು ಸಂಭವಿಸಿವೆ.
ಕೊಪ್ಪಳದಲ್ಲಿ ಸಿಡಿಲಿಗೆ ಬಾಲಕ ಬಲಿ: ಶಿವಪುರದಲ್ಲಿ ನಿನ್ನೆ ಮಧ್ಯಾಹ್ನ ಸಿಡಿಲು ಬಡಿದು ಶ್ರೀಕಾಂತ ದೊಡ್ಡನಗೌಡ್ರ ಮೇಟಿ (16) ಎಂಬ ಬಾಲಕ ಸಾವನಪ್ಪಿದ ಘಟನೆ ಜರುಗಿದೆ. ನಿನ್ನೆ ಏಕಾಏಕಿ ಗಾಳಿಯೊಂದಿಗೆ ಆರಂಭವಾದ ಮಳೆಗೆ ಜಿಲ್ಲೆಯಾದ್ಯಂತ ಹಲವಾರು ಮರಗಳು ದರೆಗುರುಳಿದ್ದು, ಸಿಡಿಲು ಬಡಿದು ಗಾಯಗೊಂಡಿದ್ದ ಶ್ರೀಕಾಂತನನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯುತ್ತಿದ್ದ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಿಡಿಲಿಗೆ ಗ್ರಾ.ಪಂ ಸದಸ್ಯ ಸಾವು: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಡಿ ಸಿದ್ದಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಮೃತ ವ್ಯಕ್ತಿಯನ್ನು ಮಲ್ಲಿಕಾರ್ಜುನ (38) ಎಂದು ಗುರುತಿಸಲಾಗಿದೆ. ಅವರು ಭಾನುವಾರ ಸಂಜೆ ಮನೆ ಹಿಂಭಾಗದಲ್ಲಿಯೇ ಇದ್ದ ಹೊಲದಲ್ಲಿ ಹೋದಾಗ ಗುಡುಗು ಸಹಿತ ಮಳೆ ಆರಂಭವಾಗಿ ಸಿಡಿಲು ಬಡಿದಿದೆ. ಇದರಿಂದ ಮಲ್ಲಿಕಾರ್ಜುನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದೇ ರೀತಿ ಅಪ್ಪೇನಹಳ್ಳಿ ಬಳಿ ಹೊಲದಲ್ಲಿ ಮೇಯುತ್ತಿದ್ದ ಕುರಿ ಹಿಂಡಿಗೆ ಸಿಡಿಲು ಬಡಿದಿದ್ದು, ದೇವರಹಟ್ಟಿ ಚಂದ್ರಪ್ಪ ಅವರಿಗೆ ಸೇರಿದ 3 ಕುರಿ ಮೃತಪಟ್ಟಿವೆ.
ಮೈಸೂರಿನಲ್ಲಿ ಮೂವರು ಸಾವು: ಶನಿವಾರ, ಭಾನುವಾರ ಸುರಿದ ಗುಡುಗು ಸಹಿತ ಮಳೆಯ ಪರಿಣಾಮ ಜಿಲ್ಲೆಯಲ್ಲಿ ಒಟ್ಟು 3 ಮಂದಿ ಸಾವನ್ನಪ್ಪಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಅವರ್ತಿ ಗ್ರಾಮದ ರೈತ ಲೋಕೇಶ್ (55), ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಹುಣಸೂರು ತಾಲೂಕಿನ ಮಂಟಿಕೊಪ್ಪಲು ಗ್ರಾಮದ ರೈತ ಹರೀಶ್ ಸಿಡಿಲಿಗೆ ಬಲಿಯಾಗಿದ್ದಾರೆ.
ಓದಿ: ಸ್ಕೂಟಿ ಮೇಲೆ ಮರ ಬಿದ್ದು ವ್ಯಕ್ತಿ ಸಾವು; ಇಬ್ಬರು ವಿದ್ಯಾರ್ಥಿಗಳು ನದಿ ನೀರುಪಾಲು
ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದಲ್ಲಿ ಜಮೀನು ಉಳಿಮೆ ಕೆಲಸ ಮಾಡುವಾಗ ನೆಲದ ಮೇಲೆ ಬಿದ್ದ ವಿದ್ಯುತ್ ತಂತಿಯನ್ನು ತುಳಿದ ಪರಿಣಾಮ ವಿದ್ಯುತ್ ಹರಿದು ಸ್ಥಳದಲ್ಲಿಯೇ ಯುವಕನೊಬ್ಬ ಮೃತಪಟ್ಟಿದ್ದಾನೆ. ಜೊತೆಗೆ ಆತನೊಂದಿಗಿದ್ದ ಇಬ್ಬರು ಅಸ್ವಸ್ಥಗೊಂಡಿರುವ ಘಟನೆ ಶನಿವಾರ ನಡೆದಿತ್ತು. ದೊಡ್ಡಕೊಪ್ಪಲು ಗ್ರಾಮದ ಸ್ವಾಮಿ (18) ಮೃತ ಯುವಕ ಹಾಗು ಹರೀಶ್(42) ಮತ್ತು ಸಂಜಯ್ (19) ಗಾಯಾಳುಗಳು ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರಿನಲ್ಲಿ ಮರ ಬಿದ್ದು ವ್ಯಕ್ತಿ ಸಾವು: ಜಿಲ್ಲೆಯ ಮೂಡಿಗೆರೆ ಪಟ್ಟಣದ ಸುತ್ತಮುತ್ತ ಭಾನುವಾರ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಈ ವೇಳೆ ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರ ಉರುಳಿ ಬಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೂಡಿಗೆರೆ ಪಟ್ಟಣದ ನಿವಾಸಿ ವೇಣುಗೋಪಾಲ್ (65) ಮೃತರೆಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಆಂಧ್ರ ಯುವತಿ ಸಾವು: ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಆಗಮಿಸಿದ್ದ ಯುವತಿ ಮತ್ತು ಅವರ ಕುಟುಂಬ ಇಲ್ಲಿನ ಕಬನ್ ಪಾರ್ಕ್ ನೋಡಿಕೊಂಡು ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮಳೆ ಬಂದ ಪರಿಣಾಮ ಕೆ. ಆರ್. ಸರ್ಕಲ್ ಬಳಿಯ ಅಂಡರ್ ಪಾಸ್ ನಲ್ಲಿ ತೆರಳುತ್ತಿದ್ದಾಗ ಏಕಾಏಕಿ ನೀರು ತುಂಬಿ ಕಾರು ಮುಳುಗಡೆಯಾಯಿತು. ಕಾರಿನಲ್ಲಿ ಚಾಲಕ ಸೇರಿ ಒಟ್ಟು ಆರು ಜನರಿದ್ದರು. ತಕ್ಷಣ ಸ್ಥಳೀಯರು, ಪೊಲೀಸರು ಕಾರಿನಲ್ಲಿದ್ದವರ ರಕ್ಷಣೆಗೆ ಧಾವಿಸಿದ್ದು, ಹರಸಾಹಸಪಟ್ಟು ಆರು ಜನರನ್ನು ರಕ್ಷಿಸಿದ್ದರು. ಅವರಲ್ಲಿ ಓರ್ವ ಯುವತಿ ತೀವ್ರ ಅಸ್ವಸ್ಥಗೊಂಡಿದ್ದರಿಂದ ತಕ್ಷಣ ನೃಪತುಂಗ ರಸ್ತೆಯ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಆಸ್ಪತ್ರೆಗೆ ರವಾನಿಸುವ ಮುನ್ನವೇ ಯುವತಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮತ್ತೊಂದು ಬಲಿ: ಭಾನುವಾರ ಸಂಜೆ ಸುರಿದ ಜಡಿ ಮಳೆಗೆ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರಗಳು ನಡೆದಿವೆ. ಆಂಧ್ರ ಪ್ರದೇಶದ ಯುವತಿ ಭಾನುರೇಖಾ ಸಾವಿನ ಬೆನ್ನಲ್ಲೇ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ. ಮೃತದೇಹ ಬ್ಯಾಟರಾಯನಪುರದ ಬಳಿ ದೊರೆತಿದೆ. ಮೃತ ಯುವಕನನ್ನು ಕೆ. ಪಿ. ಅಗ್ರಹಾರದ ನಿವಾಸಿ ಲೋಕೇಶ್ (27) ಎಂದು ಗುರುತಿಸಲಾಗಿದೆ.