ಬೆಂಗಳೂರು: ದಕ್ಷಿಣ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಬಹುತೇಕ ಮಳೆಯಾಗಬಹುದು. ನಾಳೆ ಹಾಗೂ ನಾಡಿದ್ದು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗು ಹಾಸನದಲ್ಲಿ ಬಿರುಸಿನ ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿ, ಎಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಬೆಂಗಳೂರು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್. ಪಾಟೀಲ ತಿಳಿಸಿದರು.
ಜುಲೈ 25 ರಿಂದ 26 ರಂದು ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯ ತೀವ್ರತೆ ಕಡಿಮೆಯಾಗಲಿದೆ. ಈ ವೇಳಎ ರಾಜ್ಯದ ಕೆಲವು ಕಡೆಗಳಲ್ಲಿ ಮಾತ್ರ ಮಳೆಯಾಗಲಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಕೆಲವು ಕಡೆ ಮಾತ್ರ ಮಳೆಯಾಗಬಹುದು. ನಾಳೆ ನಗರದಲ್ಲಿ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದರು.
ಕರಾವಳಿ ಜಿಲ್ಲೆಗಳಲ್ಲಿ ಜುಲೈ 24 ರಿಂದ ಮಳೆಯ ತೀವ್ರತೆ ಹೆಚ್ಚಾಗಿ ಬಹುತೇಕ ಎಲ್ಲಾ ಕಡೆ ಮಳೆಯಾಗಬಹುದು. ಜುಲೈ 24, 25, 26 ರಂದು ವ್ಯಾಪಕ ಹಾಗೂ ಉಡುಪಿಯ ಕೆಲವು ಕಡೆ ಜೋರು ಮಳೆಯಾಗಲಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇಂದು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಕೆಲವೇ ಸ್ಥಳಗಳಲ್ಲಿ ಮಳೆಯಾಗಿದ್ದು, ಮಾನ್ಸೂನ್ ದುರ್ಬಲವಾಗಿದೆ. ಹೊನ್ನಾವರದಲ್ಲಿ 1.5 ಸೆಂ.ಮೀ, ನಿಪ್ಪಾಣಿ 0.5ಸೆಂ.ಮೀ, ಮಂಡ್ಯ ಜಿಲ್ಲೆಯಲ್ಲಿ 2.0 ಸೆಂ.ಮೀ ಮಳೆ ದಾಖಲಾಗಿದೆ ಎಂದರು.