ಬೆಂಗಳೂರು : ರಾಜ್ಯದಲ್ಲಿ ನೈರುತ್ಯ ಮುಂಗಾರಿನ ಅಬ್ಬರ ಕಡಿಮೆಯಾಗಿದೆ. ಇದೇ ತಿಂಗಳು 21ರಿಂದ ರಾಜ್ಯಕ್ಕೆ ಹಿಂಗಾರು ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಚುರುಕುಗೊಂಡಿದ್ದರಿಂದ ರಾಜ್ಯದಲ್ಲಿ ಒಂದು ವಾರದಿಂದ ಎಡ ಬಿಡದೇ ಮಳೆ ಸುರಿದಿತ್ತು. ಸದ್ಯ ಮುಂದಿನ ಎರಡು ದಿನಗಳವರೆಗೆ ರಾಜ್ಯದಲ್ಲಿ ಮಳೆಯಾಗುವ ಸಂಭವ ಕಡಿಮೆ ಎಂದು ಹೇಳಿದೆ.
ಅ.21ರಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಭಾಗಗಳಲ್ಲಿ ಮತ್ತೆ ಮಳೆ ಪ್ರಮಾಣ ಹೆಚ್ಚಲಿದೆ. ಹಿಂಗಾರು ಮಳೆ ಪ್ರವೇಶದ ಲಕ್ಷಣಗಳು ಕಂಡು ಬಂದಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಯೆಲ್ಲೋ ಅಲರ್ಟ್ : ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಗುಡುಗು ಸಿಡಿಲು ಸಹಿತ ಮಳೆ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಮಳೆ ಪ್ರಮಾಣ : ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಸೋಮವಾರ 5 ಸೆಂ.ಮೀ, ಕಾರ್ಕಳ, ಅಂಕೋಲಾ, ಚಿಕ್ಕಮಗಳೂರು, ಹರಪನಹಳ್ಳಿ, ತಿಪಟೂರು, ಕುಣಿಗಲ್ನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ ಎಂದು ಮಾಹಿತಿ ನೀಡಿದೆ.