ಬೆಂಗಳೂರು: ಹಿಂಗಾರು ಮಳೆ ಹಾಗೂ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮ ನಗರಾದ್ಯಂತ ಭಾರಿ ಮಳೆಯಾಗುತ್ತಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಅಧಿಕ ಮಳೆ ಪ್ರಮಾಣ ದಾಖಲಾಗಿದೆ.
ಮುಂದಿನ ಎರಡು ದಿನದಲ್ಲಿ ಬಂಗಾಳ ಕೊಲ್ಲಿಯಲ್ಲೂ ವಾಯುಭಾರ ಕುಸಿತವಾಗುವ ಸಾಧ್ಯತೆಯಿರುವುದರಿಂದ ತಮಿಳುನಾಡು ಹಾಗೂ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸುಂದರ್ ಮೇತ್ರಿ ತಿಳಿಸಿದ್ದಾರೆ.
ಮುಂದಿನ 24 ಗಂಟೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಸಿಡಿಲಿನ ಜೊತೆ ವರುಣ ಆರ್ಭಟಿಸಲಿದ್ದಾನೆ. ಕರಾವಳಿ ಭಾಗದಲ್ಲಿ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇಂದು ಬೆಳಗಿನ ಮಳೆ ವರದಿ ಪ್ರಕಾರ, ಉತ್ತರ ಕರ್ನಾಟಕದ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಬಾಗಲಕೋಟೆಯಲ್ಲಿ 135 ಮಿ.ಮೀ, ಬೆಳಗಾವಿಯಲ್ಲಿ 92 ಮಿ.ಮೀ, ಧಾರವಾಡ- 87 ಮಿ.ಮೀ, ದಕ್ಷಿಣ ಒಳನಾಡು ಜಿಲ್ಲೆಯಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ 165 ಮಿ.ಮೀ, ಉತ್ತರ ಕನ್ನಡ ಜಿಲ್ಲೆಯಲ್ಲಿ 85 ಮಿ.ಮೀ, ಉಡುಪಿಯಲ್ಲಿ 70 ಮಿ.ಮೀಟರ್ ಮಳೆ ಪ್ರಮಾಣ ದಾಖಲಾಗಿದೆ.
ವಾಯುಭಾರ ಕುಸಿತದ ಪರಿಣಾಮ ಮುಂದಿನ 48 ಗಂಟೆಗಳ ಕಾಲ ವರುಣನ ರುದ್ರ ನರ್ತನ ಮುಂದುವರೆಯಲಿದೆ. ಮುಂದಿನ ಐದು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ ಎಂದು ಸುಂದರ್ ಮೇತ್ರಿ ತಿಳಿಸಿದರು.