ಬೆಂಗಳೂರು : ನೈರುತ್ಯ ಮುಂಗಾರು ರಾಜ್ಯದ ಬಹುತೇಕ ಕಡೆ ದುರ್ಬಲವಾಗಿದೆ. ಆದ್ರೆ, ಇಂದು ಕರಾವಳಿಯಲ್ಲಿ ವ್ಯಾಪಕವಾಗಿ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಖ್ಯವಾಗಿ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ 3 ಸೆಂ.ಮೀ ಮಳೆಯಾಗಿದೆ. ಹಾಗೆಯೇ ಧರ್ಮಸ್ಥಳ (ದಕ್ಷಿಣ ಕನ್ನಡ ಜಿಲ್ಲೆ), ಗೇರುಸೊಪ್ಪ (ಉತ್ತರ ಕನ್ನಡ ಜಿಲ್ಲೆ), ಸಕಲೇಶಪುರ (ಹಾಸನ ಜಿಲ್ಲೆ), ಮದ್ದೂರು (ಮಂಡ್ಯ ಜಿಲ್ಲೆ), ಮಡಿಕೇರಿ ಎಡಬ್ಲ್ಯುಎಸ್ ಅಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಮಂಗಳೂರು, ಮಾಣಿ, ಪುತ್ತೂರು (ದಕ್ಷಿಣ ಕನ್ನಡ ಜಿಲ್ಲೆ), ಮುರುಗೋಡ (ಬೆಳಗಾವಿ ಜಿಲ್ಲೆ), ಕೊಪ್ಪಳ ಎಡಬ್ಲ್ಯೂಎಸ್, ವಿರಾಜಪೇಟೆ (ಕೊಡಗು ಜಿಲ್ಲೆ), ಲಿಂಗನಮಕ್ಕಿ (ಶಿವಮೊಗ್ಗ ಜಿಲ್ಲೆ), ಕಮ್ಮರಡಿ (ಚಿಕ್ಕಮಗಳೂರು ಜಿಲ್ಲೆ) ತಲಾ 1 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂದಿನ 2 ದಿನ ಕರಾವಳಿಯ ಬಹುತೇಕ ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿಲ್ಲ. ಮೀನುಗಾರರಿಗೆ ಸಹ ಎಚ್ಚರಿಕೆಯ ಸೂಚನೆಗಳು ಇಲ್ಲ ಎಂದು ಹೇಳಿದೆ. ಮುಂದಿನ 24 ಗಂಟೆಗಳಲ್ಲಿ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ. ಬಿರುಗಾಳಿಯ ವೇಗವು ಗಂಟೆಗೆ 30 ರಿಂದ 40 ಕಿ.ಮೀ. ಇರುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಹಗುರ ಮಳೆ : ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಕೆಲವು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸಲಿದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರಪ್ರದೇಶದಲ್ಲಿ ಭಾರಿ ಮಳೆ : ದೇಶದ ವಿವಿದೆಡೆ ಭಾರಿ ಮಳೆಯಾಗುತ್ತಿದ್ದು, ಉತ್ತರಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದೆ. ಮುಂದಿನ ಎರಡು ದಿನ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಎರಡು ದಿನಗಳಲ್ಲಿ ರಾಜ್ಯಾದ್ಯಂತ ಸುರಿದ ಭಾರಿ ಮಳೆಗೆ 19 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ : 161 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ.. ಬರ ಘೋಷಣೆ ಸಚಿವ ಸಂಪುಟ ಉಪ ಸಮಿತಿ ಶಿಫಾರಸು: ಕೃಷ್ಣ ಬೈರೇಗೌಡ