ಚಿಕ್ಕಮಗಳೂರು: ಮಳೆರಾಯನ ಅಬ್ಬರಕ್ಕೆ ಕಾಫಿನಾಡಿನ ಜನರು ಕಂಗಾಲಾಗಿದ್ದಾರೆ. ಮಲೆನಾಡಿನಾದ್ಯಂತ ರಣ ಗಾಳಿ, ಮಳೆ ಆತಂಕವನ್ನು ಹೆಚ್ಚು ಮಾಡುತ್ತಿದೆ. ಬೆಟ್ಟ-ಗುಡ್ಡ ಕುಸಿತ, ಭೂ ಕುಸಿತ ಮುಂದುವರೆದಿದ್ದು, ಜನರು ಏನೂ ಮಾಡದಂತಹ ಪರಿಸ್ಥಿತಿಯಲ್ಲಿದ್ದಾರೆ.
ಮಲೆನಾಡು ಈಗ ಮಳೆನಾಡು ಆಗ್ಬಿಟ್ಟಿದೆ. ಮಳೆ ಬಿಡದೇ ಧೋ ಎಂದು ಸುರೀತಾನೆ ಇದೆ. ಈ ರೀತಿ ಮಳೆಯಾಗ್ತಿದ್ರೆ ಅದ್ಯಾರು ತಡೆದುಕೊಳ್ತಾರೆ ಹೇಳಿ. ಜನ-ಜಾನುವಾರುಗಳಲ್ಲದೇ ಇಡೀ ಜೀವ ಸಂಕುಲವೇ ಥರಗುಟ್ಟಿ ಹೋಗ್ತಿದೆ. ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಳೆಯಲ್ಲಿ ಅರ್ಧ ಉಳಿಸಿದ್ದ ವರುಣ ದೇವ ಈ ಬಾರಿ ಪೂರ್ತಿಗೊಳಿಸಿ ಬಿಡುತ್ತಾನೆಯೇನೋ ಎಂಬಂತೆ ಕಾಣಿಸ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಹಿರೇಬೈಲು, ಜಾವಳಿ, ಬಣಕಲ್, ದುರ್ಗದಹಳ್ಳಿ, ಮಲೇಮನೆ, ಆಲೇಖಾನ್ ಹೊರಟ್ಟಿ ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಲೆನಾಡಿನಲ್ಲಿ ಬೆಟ್ಟ-ಗುಡ್ಡಗಳು ಕುಸಿದ ಅಸುಪಾಸಿನ ಜಾಗದಲ್ಲೇ ಮತ್ತೆ ಅದೇ ಬೆಟ್ಟ ಗುಡ್ಡಗಳೇ ಕುಸಿತವಾಗುತ್ತಿವೆ. ಇದರಿಂದಾಗಿ ಮಲೆನಾಡಿಗರು ಗ್ರಾಮ ತೊರೆಯುವಂತ ಸ್ಥಿತಿ ನಿರ್ಮಾಣವಾಗಿದೆ. ನಮ್ಮನ್ನ ಸ್ಥಳಾಂತರಿಸಿ ಎಂದು ಸರ್ಕಾರಕ್ಕೆ ಅವಲತ್ತುಕೊಳ್ಳುತ್ತಿದ್ದಾರೆ.
ಮೂರು ದಿನಗಳಿಂದ ಮೂಡಿಗೆರೆಯಲ್ಲಿ ಯಥೇಚ್ಛವಾಗಿ ಮಳೆ ಸುರಿಯುತ್ತಿದೆ. ನಿನ್ನೆ ಸಂಜೆಯಿಂದ ಕೊಪ್ಪ, ಎನ್ಆರ್ ಪುರ ಹಾಗೂ ಶೃಂಗೇರಿಯಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಕಳಸಾದ ಹಿರೇಬೈಲು ಬಳಿ ಬೃಹತ್ ಗುಡ್ಡ ರಸ್ತೆ ಮೇಲೆ ಕುಸಿದು ಬಿದ್ದ ಕಾರಣ ಹಲವಾರು ಹಳ್ಳಿಗಳ ಮಾರ್ಗ ಮತ್ತೆ ಬಂದ್ ಆಗಿದೆ. ಮಲೆನಾಡಲ್ಲಿ ನಿರಂತರ ಮಳೆಯಾಗ್ತಿರೋದ್ರಿಂದ ಜೀವನದಿಗಳಾದ ತುಂಗಾ-ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ನೀರಿನ ಮಟ್ಟ ಏರಿದಂತೆ ಸ್ಥಳೀಯರ ಎದೆ ಬಡಿತವೂ ಹೆಚ್ಚುತ್ತಿದೆ. ಮಲೆನಾಡು ಭಾಗದಲ್ಲಿ ಗ್ರಾಮಗಳಿಗೆ ಹೋಗುವ ರಸ್ತೆಗಳಲ್ಲಿಯೂ ಮಣ್ಣು ಕುಸಿಯುತ್ತಿದ್ದು, ಬೈಕ್ ಸವಾರರೂ ಕೂಡ ರಸ್ತೆಯಲ್ಲಿ ಸಂಚಾರ ಮಾಡೋದಕ್ಕೆ ಹೆದರುವಂತಾಗಿದೆ.