ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಆರಂಭವಾಗಿದ್ದು, ಮಧ್ಯಾಹ್ನದಿಂದಲೇ ರಾಜಧಾನಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ.
ಯಲಹಂಕ, ಆರ್ಆರ್ ನಗರ, ಯಶವಂತಪುರ, ಹೆಬ್ಬಾಳ, ಮೆಜೆಸ್ಟಿಕ್, ಜಯನಗರ ,ಕೋರಮಂಗಲ ಸೇರಿದಂತೆ ನಗರದ ಬಹುತೇಕ ಎಲ್ಲ ಕಡೆ ಮಳೆಯಾಗುತ್ತಿದೆ. ಗಂಟೆಗೆ ನಲವತ್ತು ಕಿ.ಮೀ ವರೆಗೂ ಹೆಚ್ಚಿನ ವೇಗದಲ್ಲಿ ಗಾಳಿ ಬೀಸುತ್ತಿದ್ದು, ರಸ್ತೆ, ಕೆಳ ಸೇತುವೆಗಳು ನೀರಿನಿಂದ ಆವೃತವಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಟ್ರಾಫಿಕ್ ಜಾಮ್ ಸಮಸ್ಯೆ:
ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗಿ ಅವಾಂತರ ಸೃಷ್ಟಿಯಾದ ಪರಿಣಾಮ ಜನರು ಪರದಾಡುತ್ತಿದ್ದು, ಇಂದು ಬಂದ ಮಳೆಯಿಂದ ಕೆಲವು ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.
ಕೆಂಪೇಗೌಡ ಬಸ್ ನಿಲ್ದಾಣದಿಂದ ಯಶವಂತಪುರಕ್ಕೆ ಹೋಗುವ ಮಾರ್ಗ ಮಲ್ಲೇಶ್ವರಂ ಕಾಡು ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಮರಗಳು ಬಿದ್ದ ಪರಿಣಾಮ ಒಂದು ಕಾರು ಜಖಂ ಗೊಂಡಿತ್ತು. ಇದರಿಂದ ಐದು ಕಿ.ಮೀ. ತನಕ ಟ್ರಾಫಿಕ್ ಜಾಮ್ ಆಗಿ ವಾಹನ ದಟ್ಟಣೆಗೊಂಡಿತ್ತು. ಮೆಜೆಸ್ಟಿಕ್ ಭೂಮಿಕ ಥಿಯೇಟರ್ ಎದುರು ಮರವೊಂದು ರಸ್ತೆಗುರುಳಿದ್ದ ದೃಶ್ಯ ಕಂಡು ಬಂದಿದೆ.
ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ಇನ್ನೆರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಕೆಎಸ್ಎನ್ ಡಿಸಿ ನಿರ್ದೇಶಕ ಡಾ. ಶ್ರೀನಿವಾಸ್ ರೆಡ್ಡಿ ಈಟಿವಿ ಭಾರತ್ ಗೆ ತಿಳಿಸಿದ್ದು, ಮಳೆ, ಗಾಳಿ ಬೀಸುವ ವೇಳೆ ಜನರು ಹೊರಗೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.