ಬೆಂಗಳೂರು : ಶನಿವಾರ ಮತ್ತು ಭಾನುವಾರ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಿಂಚು, ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 20 21 ರಂದು ದಕ್ಷಿಣ ಒಳನಾಡಿನಲ್ಲಿ ಹಾಗೂ ಮೇ 22 ರವರೆಗೆ ಕರಾವಳಿ ಭಾಗದಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಮಳೆಯಾಗುವ ಯಾವುದೇ ಲಕ್ಷಣವಿಲ್ಲ ಎಂದು ಹೇಳಿದೆ.
ಇನ್ನೆರಡು ದಿನಗಳಲ್ಲಿ ರಾಜಧಾನಿಯಲ್ಲಿ ಮೋಡ ಕವಿದ ವಾತಾರಣ ಇರಲಿದ್ದು, ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಉಷ್ಣಾಂಶ ಕನಿಷ್ಠ 22 ರಿಂದ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಿದೆ.
ಕಲಬುರಗಿಯಲ್ಲಿ ಗರಿಷ್ಠ ತಾಪಮಾನ ದಾಖಲು : ಮಳೆಯ ಜೊತೆಗೆ ಬೇಸಿಗೆ ತಾಪಮಾನ ಕೂಡಾ ಹೆಚ್ಚಾಗಿದ್ದು, ಕಲಬುರಗಿಯಲ್ಲಿ ಗುರುವಾರ 40.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ತಾಪಮಾನವಾಗಿದೆ. ಬಳ್ಳಾರಿಯಲ್ಲಿ ಗರಿಷ್ಠ 40.6 ಡಿಗ್ರಿ ರಾಯಚೂರಿನಲ್ಲಿ 40.2 ಡಿಗ್ರಿ, ವಿಜಯಪುರದಲ್ಲಿ 39.2 ಡಿಗ್ರಿ ಮತ್ತು ಗದಗದಲ್ಲಿ 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ : ರಾಜ್ಯಾದ್ಯಂತ ಮುಂದಿನ 3 ದಿನ ಗುಡುಗು ಸಹಿತ ಮಳೆ: ಕೆಲವೆಡೆ ಯೆಲ್ಲೋ ಅಲರ್ಟ್ ಘೋಷಣೆ
ಕಳೆದ ಮೂರು ದಿನಗಳಿಂದ ಮೇ 15 ರಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮುಂದಿನ 2 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ರಾಮನಗರದಲ್ಲಿ ಮುಂದಿನ 2 ದಿನ ಎಂದರೇ ಮೇ 16 ರಿಂದ 17 ರವೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.
ಮೋಚಾ ಚಂಡಮಾರುತ ದಿಂದಾಗಿ ಭಾರಿ ಮಳೆ : ಬಂಗಾಳಕೊಲ್ಲಿಯಲ್ಲಿ ಮೋಚಾ ಚಂಡಮಾರುತ ಉಂಟಾಗಿದ್ದ ಹಿನ್ನೆಲೆಯಲ್ಲಿ (ಮೇ 12) ರಂದು ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ ಆಗುವ ಎಚ್ಚರಿಕೆ ನೀಡಿತ್ತು. ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿದ್ದು, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಮಳೆ ಸಾಧ್ಯತೆ ಇರುತ್ತದೆ. ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 30-40 ಕಿ. ಮೀ ಇರುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಒಣಹವೆ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿತ್ತು.
ಇದನ್ನೂ ಓದಿ : ಬಿ.ಕೆ.ಹರಿಪ್ರಸಾದ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಕೊಡಿ: ಕಾಂಗ್ರೆಸ್ ಹೈಕಮಾಂಡ್ಗೆ ಅಭಯಚಂದ್ರ ಜೈನ್ ಒತ್ತಾಯ