ಬೆಂಗಳೂರು : ಪುಲಕೇಶಿ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಸಾವನ್ನಪ್ಪಿದ 6 ಮಂದಿ ಕಾರ್ಮಿಕರ ಕುಟುಂಬದವರಿಗೆ ಪರಿಹಾರ ನೀಡಲು ನಿರ್ದೇಶನ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಬಿಬಿಎಂಪಿ, ಕಟ್ಟಡದ ಮಾಲೀಕ ಹಾಗೂ ಗುತ್ತಿಗೆದಾರರನ್ನು ಪ್ರತಿವಾದಿಯಾಗಿಸುವಂತೆ ಹೈಕೋರ್ಟ್ ಅರ್ಜಿದಾರರಿಗೆ ಸೂಚಿಸಿದೆ.
ಈ ಕುರಿತು ಬೆಂಗಳೂರು ಪೂರ್ವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ನ್ಯಾ. ಸತೀಶ್ ಚಂದ್ರ ಶರ್ಮಾ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರನ್ನು ಪ್ರಶ್ನಿಸಿದ ಪೀಠ, ಯಾವ ಕಾನೂನಿನ ಅಡಿ ಪರಿಹಾರ ಒದಗಿಸಲು ಕೋರಲಾಗಿದೆ ಎಂದು ಕೇಳಿತು. ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲ ಎಸ್. ಉಮಾಪತಿ, ಯಾವುದೇ ನಿರ್ದಿಷ್ಟ ಕಾನೂನಿನ ಅಡಿ ಪರಿಹಾರ ಕೋರಿಲ್ಲ.
ನಿರ್ಮಾಣ ಹಂತದ ಕಟ್ಟಡ ಕುಸಿದು ಮೃತಪಟ್ಟಿದ್ದ ಕಾರ್ಮಿಕರ ಕುಟುಂಬಕ್ಕೆ ಸರ್ಕಾರವೇ ಪರಿಹಾರ ನೀಡಿತ್ತು. ಈ ಸಂಬಂಧ 1998ರಲ್ಲಿ ಹೈಕೋರ್ಟ್ ಆದೇಶ ನೀಡಿದ ಅನುಸಾರ ಪರಿಹಾರ ಕೋರಿದ್ದೇವೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಪುಲಕೇಶಿ ನಗರದ ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟಿರುವರು ಯಾರೆಂದು ಪ್ರಶ್ನಿಸಿತು. ವಕೀಲ ಉಮಾಪತಿ ಮಾಹಿತಿ ನೀಡಿ, ಮೃತರೆಲ್ಲರೂ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕರು ಎಂದರು. ಹಾಗಿದ್ದರೆ, ಮೃತರಿಗೆ ಕಾರ್ಮಿಕರ ಪರಿಹಾರ ಕಾಯ್ದೆ ಅನುಸಾರ ಪರಿಹಾರ ನೀಡಬಹುದಾಗಿದೆ. ಹೀಗಾಗಿ, ಅರ್ಜಿಯಲ್ಲಿ ಕಟ್ಟಡದ ಮಾಲೀಕ, ಗುತ್ತಿಗೆದಾರ ಹಾಗೂ ಬಿಬಿಎಂಪಿಯನ್ನು ಪ್ರತಿವಾದಿಯಾಗಿಸಲು ಸೂಚಿಸಿ, ವಿಚಾರಣೆಯನ್ನು ಅ.1ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ : ಪುಲಕೇಶಿನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ 2019ರ ಜುಲೈ 10ರಂದು ಕುಸಿದು ಬಿದ್ದು, 6 ಜನ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪೂರ್ಣಗೊಳಿಸಿಲ್ಲ. ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿಲ್ಲ ಎಂದು ಆರೋಪಿಸಿರುವ ಅರ್ಜಿದಾರರು ಪಿಐಎಲ್ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ, ಪ್ರಕರಣದ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಅಂತಿಮ ವರದಿ ಸಲ್ಲಿಸಲು ಪೊಲೀಸರಿಗೆ ನಿರ್ದೇಶಿಸಬೇಕು ಹಾಗೂ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಪುಲಿಕೇಶಿನಗರದ ಕಟ್ಟಡ ಕುಸಿತ ಪ್ರಕರಣ: ಇಬ್ಬರು ಎಂಜಿನಿಯರ್ಗಳ ಬಂಧನ