ಬೆಂಗಳೂರು: ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಆರೋಗ್ಯ ಸಚಿವ ಡಾ.ಸುಧಾಕರ್ ಭೇಟಿ ನೀಡಿ ವ್ಯಾಕ್ಸಿನ್ ಪಡೆಯುವವರ ಜೊತೆ ಸಮಾಲೋಚನೆ ನಡೆಸಿದರು.
ಈ ವೇಳೆ ಲಸಿಕೆ ಹಾಕಿಸಿಕೊಂಡವರು ಆಲ್ಕೋಹಾಲ್ ಸೇವಿಸುವಂತಿಲ್ಲ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಆಲ್ಕೋಹಾಲ್ ತೆಗೆದುಕೊಂಡಾಗ ದೇಹದ ಶಕ್ತಿ ಕಡಿಮೆಯಾಗುತ್ತದೆ ಎಂದು ತಾಂತ್ರಿಕ ಸಲಹೆ ಸಮಿತಿಯವರು ನಿನ್ನೆ ಹೇಳಿಕೆ ನೀಡಿದ್ದರು. ಸಾಮಾನ್ಯವಾಗಿ ಆಲ್ಕೋಹಾಲ್ ದೇಹದ ರೋಗ ನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ. ಈ ಬಗ್ಗೆ ಸರಿಯಾದ ಅಧ್ಯಯನ ಮಾಡಿ, ಅಧಿಕೃತವಾಗಿ ಮಾಹಿತಿ ನೀಡುತ್ತೇವೆ ಎಂದರು.
ವ್ಯಕ್ತಿಗೆ ರೋಗನಿರೋಧಕ ಶಕ್ತಿ ಬರಲು 45 ದಿನಗಳು ಬೇಕಾಗುತ್ತದೆ. ಹಾಗಾಗಿ ಮೊದಲ ಡೋಸ್ ತೆಗೆದುಕೊಂಡವರು 2ನೇ ಡೋಸ್ ತೆಗೆದುಕೊಳ್ಳುವವರೆಗೂ ನಡವಳಿಕೆಯನ್ನು ಬದಲಾಯಿಸಬಾರದು. ನಾಳೆ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಲಸಿಕೆ ಕಾರ್ಯ ನಡೆಯುತ್ತದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಗೃಹ ಸಚಿವರ ವಿರುದ್ಧ ರೈತ ಮಹಿಳೆ ಗಂಭೀರ ಆರೋಪ: ಬಾರುಕೋಲು ಹೊಡೆದು ವಿಭಿನ್ನ ಪ್ರತಿಭಟನೆ
ಮಣಿಪಾಲ್ ಆಸ್ಪತ್ರೆಯ ಚೇರ್‌ಮನ್ ಡಾ.ಸುದರ್ಶನ್ ಬಲ್ಲಾಳ್ ಮಾತನಾಡಿ, ನನಗೆ ವ್ಯಾಕ್ಸಿನ್ ಪಡೆಯಲು ಅವಕಾಶ ಸಿಕ್ಕಿದ್ದಕ್ಕೆ ಆಭಾರಿಯಾಗಿದ್ದೇನೆ. ನಾನು ವ್ಯಾಕ್ಸಿನ್ ತೆಗೆದುಕೊಂಡು ಒಂದು ದಿನವಾಗಿದೆ. ಏನೇನು ಸೈಡ್ ಎಫೆಕ್ಟ್ ಆಗಿಲ್ಲ. ಹೀಗಾಗಿ ವ್ಯಾಕ್ಸಿನ್ ಬಹಳ ಸೇಫ್ ಎನಿಸುತ್ತಿದೆ. ಇಂಗ್ಲೆಂಡ್ನಲ್ಲೆಲ್ಲ ಈ ವ್ಯಾಕ್ಸಿನ್ ತೆಗೆದುಕೊಳ್ಳುತ್ತಿದ್ದಾರೆ. ಯಾರೂ ಕೂಡ ಭಯಪಡದೆ ಲಸಿಕೆ ತೆಗೆದುಕೊಳ್ಳಬೇಕು. ಜೊತೆಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಮುಂದುವರಿಸಬೇಕು ಎಂದರು.