ಬೆಂಗಳೂರು: ಪ್ರತಿ ತಾಲೂಕಿನಲ್ಲೂ ತಾಯಿ-ಮಗು ಆಸ್ಪತ್ರೆಗೆ ಬೇಡಿಕೆಯಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುವ ಬಗ್ಗೆ ಸಂಬಂಧಿಸಿದ ಶಾಸಕರೊಂದಿಗೆ ಸಭೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪುತ್ತೂರು ಉಪವಿಭಾಗದಲ್ಲಿ ತಾಯಿ ಮತ್ತು ಮಕ್ಕಳ ವಿಶೇಷ ಘಟಕವನ್ನು ಸ್ಥಾಪಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಸಾಧ್ಯವಿಲ್ಲ. ಹೀಗಾಗಿ ಶಾಸಕರೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ವಹಿಸಲಾಗುವುದು ಎಂದರು.
ಪುತ್ತೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯನ್ನು 300 ಹಾಸಿಗೆಗೆ ಮೇಲ್ದರ್ಜೆಗೇರಿಸಿ ಕಟ್ಟಡ ನಿರ್ಮಾಣವನ್ನು 18,900 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲು ಸರ್ಕಾರದ ಪ್ರಸ್ತಾಪವಿದೆ. ಕೇಂದ್ರ ಸರ್ಕಾರ ಶೇ.60ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.40ರಷ್ಟು ಅನುದಾನ ಭರಿಸಲಿದ್ದು, ಕೇಂದ್ರದ ಮಾರ್ಗಸೂಚಿಯನ್ನು ಅನುಸರಿಸುವುದು ಅನಿವಾರ್ಯ. ಮಾರ್ಗಸೂಚಿಯಡಿ ನಿಗದಿಪಡಿಸಿರುವ ಮಾನದಂಡವನ್ನು ಪೂರೈಸಿದ ಆಸ್ಪತ್ರೆಗಳಲ್ಲಿ ಹೊಸದಾಗಿ ತಾಯಿ-ಮಕ್ಕಳ ಆಸ್ಪತ್ರೆಗೆ ಮಂಜೂರು ಮಾಡಲಾಗುವುದು ಎಂದು ಶಾಸಕರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಆಸ್ಪತ್ರೆಯಲ್ಲಿ ತಾಯಿ-ಮಕ್ಕಳ ಹಾಸಿಗೆಗಳ ಶೇ.100ರ ಸಾಮರ್ಥ್ಯಕ್ಕೆ ಕನಿಷ್ಠ 70ರಷ್ಟು ಹಾಸಿಗೆಗಳು ಹೆರಿಗೆಗಾಗಿ ಭರ್ತಿಯಾಗಬೇಕು ಎಂಬುದು ಮಾನದಂಡವಿದೆ. ಬಾಗೇಪಲ್ಲಿ ತಾಲೂಕಿನಲ್ಲಿ ತಾಯಿ-ಮಗು ಆಸ್ಪತ್ರೆಗೆ ಜಮೀನು ಮಂಜೂರಾಗಿದೆ. ಮಾರ್ಗಸೂಚಿ ಅನ್ವಯ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹೊಸ ವೈದ್ಯಕೀಯ ಕಾಲೇಜು: ವಿಜಯಪುರ ಸೇರಿದಂತೆ ರಾಜ್ಯದ 8-10 ಜಿಲ್ಲೆಗಳಲ್ಲಿ ಟಿಪಿಪಿ ಮಾದರಿಯಲ್ಲಿ ಹೊಸ ವೈದ್ಯಕೀಯ ಕಾಲೇಜು ಪ್ರಾರಂಭಿಸಲಾಗುವುದು. ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ. ಆಸ್ಪತ್ರೆ ಆವರಣದಲ್ಲಿ ಅಂಕಾಲಜಿ ಘಟಕ ಒಳಗೊಂಡಂತೆ ಎರಡನೇ ಹಂತದ ನಿರ್ಮಾಣ ಕಾಮಗಾರಿಗೆ 88.68 ಕೋಟಿ ರೂ. ನಿಗದಿಪಡಿಸಲಾಗಿದ್ದು, ಸಿವಿಲ್ ಕಾಮಗಾರಿಗೆ 48 ಕೋಟಿ ನಿಗದಿಯಾಗಿದೆ. ಅಂಕಾಲಜಿಗೆ 5.5 ಕೋಟಿ ಬಿಡುಗಡೆಯಾಗಿದೆ. ಏನಾದರೂ ಗೊಂದಲಗಳಿದ್ದರೆ ತಮ್ಮನ್ನು ಕರೆದು ಸಭೆ ನಡೆಸುವುದಾಗಿ ಸಚಿವರು ಹೇಳಿದರು.
ಪಡಿತರ ಚೀಟಿ: ಅಂತ್ಯೋದಯ ಪಡಿತರ ಚೀಟಿ ಫಲಾನುಭವಿಗಳ ಆಯ್ಕೆಯಲ್ಲಿ ಅನ್ಯಾಯವಾಗಿದ್ದರೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಿಧಾನಸಭೆಯಲ್ಲಿ ಶಾಸಕ ಅಬ್ಬಯ್ಯ ಪ್ರಸಾದ್ ಅವರ ಪ್ರಶ್ನೆಗೆ ಅರಣ್ಯ ಮತ್ತು ಆಹಾರ ನಾಗರಿಕ ಸರಬರಾಜು ಸಚಿವರ ಪರವಾಗಿ ಉತ್ತರಿಸಿದರು.
ರಾಜ್ಯದಲ್ಲಿ 1,09,700ಕ್ಕಿಂತ ಹೆಚ್ಚಿಗೆ ನೀಡಲು ಆಗದಲು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪಡಿತರ ಚೀಟಿ ನೀಡಿಕೆ ಗುರಿ ನಿಗದಿಯಾಗಿದೆ. ಶಾಸಕರ ಕ್ಷೇತ್ರದಲ್ಲಿ ಪಡಿತರ ಚೀಟಿ ಫಲಾನುಭವಿ ಆಯ್ಕೆಯಲ್ಲಿ ಅನ್ಯಾಯವಾಗಿದ್ದರೆ ಸರಿಪಡಿಸಲಾಗುವುದು. ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಪಡಿತರ ಚೀಟಿ ಪಡೆಯಲು 3900 ಅರ್ಜಿ ಸ್ವೀಕೃತವಾಗಿದ್ದವು. 750 ಫಲಾನುಭವಿಗಳಿಗೆ ಪಡಿತರ ಚೀಟಿ ನೀಡಿದ್ದು, 279 ತಿರಸ್ಕೃತವಾಗಿವೆ. 3,457 ಅರ್ಜಿಗಳು ಅನುಮೋದನೆಗೆ ಬಾಕಿ ಇವೆ ಎಂದು ಹೇಳಿದರು.
ಅರಣ್ಯ ಬೆಳೆಸಲು ಅನುದಾನ: ಶಿರಗುಪ್ಪ ಕ್ಷೇತ್ರದಲ್ಲಿ ಅರಣ್ಯ ಬೆಳೆಸಲು ಮುಂದಿನ ವರ್ಷ ಅನುದಾನ ನೀಡಲಾಗುವುದು. ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯಲ್ಲಿ ವಾಹನಗಳ ವೇಗ ತಡೆಯಲು ಸ್ಪೀಡ್ ಬ್ರೇಕರ್ ಹಾಕಲಾಗುವುದು ಎಂದು ಶಾಸಕ ಬಿ.ಎಂ.ಸುರುಪೂರ ಶೆಟ್ಟಿ ಪ್ರಶ್ನೆಗೆ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಉತ್ತರಿಸಿದರು.
ಇದನ್ನೂ ಓದಿ: ವಿಧಾನಸೌಧದಲ್ಲಿ ಸಚಿವ ಅಶೋಕ್ ಆಯೋಜಿಸಿದ್ದ ಭೋಜನ ಕೂಟಕ್ಕೆ ಕಾಂಗ್ರೆಸ್ ಶಾಸಕರು ಗೈರು